ಚೀನಾ: 2ನೇ ಮಗುವನ್ನು ಹೊಂದುವ ದಂಪತಿಗೆ ಭಾರೀ ಕೊಡುಗೆ

Update: 2018-07-19 16:07 GMT
ಸಾಂದರ್ಭಿಕ ಚಿತ್ರ

ಬೀಜಿಂಗ್, ಜು. 19: ಎರಡನೇ ಮಗುವನ್ನು ಹೊಂದುವುದಕ್ಕೆ ದಂಪತಿಗಳ ಮನವೊಲಿಸುವುದಕ್ಕಾಗಿ ಆರ್ಥಿಕ ಸಬ್ಸಿಡಿಗಳನ್ನು ನೀಡುವ ಹಾಗೂ ವೇತನ ಸಹಿತ ಹೆರಿಗೆ ರಜೆಯನ್ನು ವಿಸ್ತರಿಸುವ ಕೊಡುಗೆಗಳನ್ನು ಚೀನಾ ಸರಕಾರ ಮುಂದಿಟ್ಟಿದೆ.

ಒಂದೇ ಮಗು ನೀತಿಯನ್ನು 2016ರಲ್ಲಿ ಹಿಂದಕ್ಕೆ ಪಡೆದುಕೊಂಡ ಹೊರತಾಗಿಯೂ ಜನನ ದರ ನಿರಂತರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಚಿಂತೆಗೀಡಾಗಿರುವ ಚೀನಾ ಈ ವಿನೂತನ ಕ್ರಮಗಳನ್ನು ತೆಗೆದುಕೊಂಡಿದೆ.

ಚೀನಾದ 31 ಪ್ರಾಂತಗಳು, ವಲಯಗಳು ಮತ್ತು ಮುನಿಸಿಪಾಲಿಟಿಗಳು 98 ದಿನಗಳ ಕಡ್ಡಾಯ ಹೆರಿಗೆ ರಜೆಯನ್ನು 138 ದಿನಗಳಿಂದ 158 ದಿನಗಳವರೆಗೆ ವಿಸ್ತರಿಸಿವೆ ಎಂದು ಸರಕಾರಿ ನಿಯಂತ್ರಣದ ವೆಬ್‌ಸೈಟ್ ‘ದಪೇಪರ್.ಸಿಎನ್’ ವರದಿ ಮಾಡಿದೆ.

ಕೆಲವು ವಲಯಗಳಲ್ಲಿ ದಂಪತಿಗಳಿಗೆ ಹಣಕಾಸು ಭತ್ತೆಗಳು ಮತ್ತು ವೈದ್ಯಕೀಯ ಸೇವೆಗಳನ್ನೂ ಘೋಷಿಸಲಾಗಿದೆ. ತಂದೆಯಂದಿರಿಗೂ 15ರಿಂದ 30 ದಿನಗಳ ಪಿತೃತ್ವ ರಜೆಯನ್ನು ನೀಡಲಾಗಿದೆ.

ಮುಂದಿನ ದಶಕದಲ್ಲಿ ಜಗತ್ತಿನ ಅತ್ಯಂತ ಹೆಚ್ಚು ಜನಸಂಖ್ಯೆಯ ದೇಶವಾಗಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

2015ರಲ್ಲಿ ಚೀನಾದ ಜನಸಂಖ್ಯೆ 137 ಕೋಟಿಯಾಗಿತ್ತು. ಅದೇ ವರ್ಷದಲ್ಲಿ ಭಾರತದ ಜನಸಂಖ್ಯೆ 130 ಕೋಟಿ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News