​ಫುಟ್ಬಾಲ್: ಚೀನಾ ವಿರುದ್ಧ ಪ್ರದರ್ಶನ ಪಂದ್ಯ ಆಡಲು ಭಾರತ ತಯಾರಿ

Update: 2018-07-20 18:16 GMT

ಹೊಸದಿಲ್ಲಿ, ಜು.20: 2019ರಲ್ಲಿ ನಡೆಯುವ ಏಶ್ಯಾಕಪ್‌ನ ಪೂರ್ವ ತಯಾರಿಯ ಭಾಗವಾಗಿ ಅಕ್ಟೋಬರ್‌ನಲ್ಲಿ ಭಾರತದ ಫುಟ್ಬಾಲ್ ತಂಡ ಚೀನಾ ವಿರುದ್ಧ ಅಂತರ್‌ರಾಷ್ಟ್ರೀಯ ಪ್ರದರ್ಶನ ಪಂದ್ಯವನ್ನಾಡಲು ನಿರ್ಧರಿಸಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಶುಕ್ರವಾರ ತಿಳಿಸಿದೆ.

ಫಿಫಾ ರ್ಯಾಂಕಿನಲ್ಲಿ 97ನೇ ಸ್ಥಾನದಲ್ಲಿರುವ ಭಾರತ 75ನೇ ರ್ಯಾಂಕಿನ ಚೀನಾ ವಿರುದ್ಧ ನಡೆಯಲಿರುವ ಸೌಹಾರ್ದ ಪಂದ್ಯ ವನ್ನು ಆಡಲು ಬೀಜಿಂಗ್‌ಗೆ ಪ್ರಯಾಣ ಬೆಳೆಸಲಿದೆ.

ಮುಂಬರುವ ದಿನಗಳಲ್ಲಿ ಪ್ರದರ್ಶನ ಪಂದ್ಯದ ದಿನಾಂಕ ವನ್ನು ಘೋಷಿಸಲಾಗುತ್ತದೆ. ಎಐಎಫ್‌ಎಫ್ ಅಕ್ಟೋಬರ್ 13 ರಂದು ಪಂದ್ಯ ನಡೆಸಲು ದಿನ ನಿಗದಿಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಭಾರತ ಹಾಗೂ ಚೀನಾ 17 ಬಾರಿ ಮುಖಾಮುಖಿಯಾಗಿವೆ. ಎಲ್ಲ ಪಂದ್ಯಗಳನ್ನು ಭಾರತ ನೆಲದಲ್ಲಿ ಆಡಿದ್ದವು. 1997ರಲ್ಲಿ ಕೊಚ್ಚಿಯಲ್ಲಿ ನಡೆದ ನೆಹರೂ ಕಪ್‌ನಲ್ಲಿ ಕೊನೆಯ ಬಾರಿ ಎರಡೂ ತಂಡಗಳು ಆಡಿದ್ದವು.

ಭಾರತದ ಅಂಡರ್-16 ಫುಟ್ಬಾಲ್ ತಂಡ ನಾಲ್ಕು ರಾಷ್ಟ್ರಗಳ ಆಹ್ವಾನಿತ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿತ್ತು. ಟೂರ್ನಿಯಲ್ಲಿ ಥಾಯ್ಲೆಂಡ್ ಹಾಗೂ ದಕ್ಷಿಣ ಕೊರಿಯಾ ತಂಡಗಳು ಭಾಗವಹಿಸಿವೆ.

‘‘ಚೀನಾ ಹಾಗೂ ಭಾರತ ಈಗ ಜಾಗತಿಕ ಮಟ್ಟದಲ್ಲಿ ವೇಗ ವಾಗಿ ಬೆಳೆಯುತ್ತಿರುವ ಎರಡು ಉದಯೋನ್ಮುಖ ಫುಟ್ಬಾಲ್ ತಂಡಗಳಾಗಿವೆ. ಚೀನಾದ ಫುಟ್ಬಾಲ್ ಸಂಸ್ಥೆಯೊಂದಿಗೆ ತಿಂಗಳ ಕಾಲ ನಡೆದ ಚರ್ಚೆಯ ಬಳಿಕ ಒಮ್ಮತಕ್ಕೆ ಬಂದಿರುವುದು ಸಂತೋಷದ ವಿಚಾರ’’ ಎಂದು ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಹೇಳಿದ್ದಾರೆ.

ಭಾರತ ತಂಡ ಚೀನಾ ವಿರುದ್ಧ ಇನ್ನಷ್ಟೇ ಗೆಲುವಿನ ಖಾತೆ ತೆರೆಯಬೇಕಾಗಿದೆ. ಕಳೆದ 17 ಪಂದ್ಯಗಳಲ್ಲಿ ಚೀನಾ 12ರಲ್ಲಿ ಜಯ ಸಾಧಿಸಿದ್ದು ಉಳಿದ 5 ಪಂದ್ಯ ಗಳು ಡ್ರಾನಲ್ಲಿ ಕೊನೆಗೊಂಡಿವೆ. ಭಾರತ ಫುಟ್ಬಾಲ್ ತಂಡ ಕಳೆದ ಕೆಲವು ವರ್ಷಗಳಿಂದ ಅಜೇಯ ದಾಖಲೆ ಕಾಯ್ದುಕೊಂಡಿದೆ. 2016ರ ಜೂನ್‌ನಿಂದ2017ರ ನವೆಂಬರ್‌ನ ತನಕ 12 ಅಧಿಕೃತ ಪಂದ್ಯ ಗಳಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News