ಬಿಸಿಸಿಐ ಆ್ಯಪ್‌ನಲ್ಲಿ ಧೋನಿ ಈಗಲೂ ನಾಯಕ!

Update: 2018-07-20 18:20 GMT

ಹೊಸದಿಲ್ಲಿ, ಜು.20: ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ವೇಳೆ ನಿಧಾನಗತಿಯ ಇನಿಂಗ್ಸ್‌ಗೆ ಟೀಕೆಗೆ ಗುರಿಯಾಗಿದ್ದ ಭಾರತದ ವಿಕೆಟ್‌ಕೀಪರ್- ದಾಂಡಿಗ ಮಹೇಂದ್ರ ಸಿಂಗ್ ಧೋನಿ ಇಂದು ಮತ್ತೊಮ್ಮೆ ಚರ್ಚೆಗೆ ಗ್ರಾಸರಾಗಿದ್ದಾರೆ.

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಅಧಿಕೃತ ಆ್ಯಪ್‌ನಲ್ಲಿ ಎಂಎಸ್ ಧೋನಿ ಈಗಲೂ ಭಾರತದ ನಾಯಕನಾಗಿದ್ದಾರೆ. ಇದನ್ನು ಗಮನಿ ಸಿರುವ ಕ್ರಿಕೆಟ್ ಅಭಿಮಾನಿಗಳು ಆ್ಯಪ್ ಸ್ಕ್ರೀನ್‌ಶಾಟ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಸಿಐಯನ್ನು ವ್ಯಂಗ್ಯ ಮಾಡಲಾರಂಭಿಸಿದ್ದಾರೆ.

ಧೋನಿಯ ನಿವೃತ್ತಿಯ ಬಗ್ಗೆ ನಡೆಯುತ್ತಿದ್ದ ಚರ್ಚೆಯು ಇದೀಗ ಬಿಸಿಸಿಐ ತನ್ನ ಅಧಿಕೃತ ಆ್ಯಪ್‌ನಲ್ಲಿ ಮಾಡಿರುವ ತಪ್ಪಿನತ್ತ ತಿರುಗಿದೆ.

 ‘‘ಬಿಸಿಸಿಐ ತನ್ನ ಹಿಂದಿನ ನಾಯಕ (ಎಂಎಸ್ ಧೋನಿ) ಮತ್ತೊಮ್ಮೆ ನಾಯಕ ನಾಗುವುದನ್ನು ಬಯಸಿದಂತೆ ಕಾಣುತ್ತಿದೆ. ಅಥವಾ ವೆಬ್‌ಸೈಟ್‌ನ್ನು ಅಪ್‌ಡೇಟ್ ಮಾಡಲು ಮರೆತಂತಿದೆ. ಆದಾಗ್ಯೂ ಎಂಎಸ್ ಧೋನಿಯ ಅಭಿಮಾನಿಯಾಗಿ ಧೋನಿಯನ್ನು ನಾಯಕನಾಗಿ ಈಗಲೂ ನೆನಪಿಸಿಕೊಳ್ಳುತ್ತಿರುವ ಬಿಸಿಸಿಐ ಬಗ್ಗೆ ನಮಗೆ ಹೆಮ್ಮೆಯಾಗುತ್ತಿದೆ’’ಎಂದು ಓರ್ವ ಅಭಿಮಾನಿ ಟ್ವೀಟ್ ಮಾಡಿದ್ದಾನೆ.

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋತ ನಂತರ ಡ್ರೆಸ್ಸಿಂಗ್‌ರೂಮ್‌ಗೆ ವಾಪಸಾಗುತ್ತಿದ್ದ ಧೋನಿ ಅವರು ಅಂಪೈರ್ ಬಳಿ ಚೆಂಡನ್ನು ಕೇಳಿ ಪಡೆದಿದ್ದರು. ಅವರ ಈ ನಡೆಯು ಹಲವು ಊಹಾಪೋಹಕ್ಕೆ ಕಾರಣವಾಗಿತ್ತು. ಅವರು ಶೀಘ್ರವೇ ನಿವೃತ್ತಿಯಾಗಲಿದ್ದಾರೆಂಬ ಮಾತು ಕೇಳಿಬಂದಿತ್ತು.

ಭಾರತ ತಂಡದ ಕೋಚ್ ರವಿ ಶಾಸ್ತ್ರಿ ಅವರು ಧೋನಿ ನಿವೃತ್ತಿ ಯಾಗಲಿ ದ್ದಾರೆಂಬ ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆ ಯನ್ನು ನಿರಾಕರಿಸಿದ್ದು, ‘‘ಎಂಎಸ್ ಧೋನಿ ಚೆಂಡನ್ನು ಬೌಲಿಂಗ್ ಕೋಚ್ ಭರತ್ ಅರುಣ್‌ಗೆ ತೋರಿಸಲು ಬಯಸಿದ್ದರು. ಹಾಗಾಗಿ ಚೆಂಡನ್ನು ಅಂಪೈರ್‌ರಿಂದ ಕೇಳಿ ಪಡೆದು ಕೊಂಡಿದ್ದರು’’ ಎಂದು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News