ಮಾದಕದ್ರವ್ಯ ಪ್ರಕರಣ: ಪಾಕಿಸ್ತಾನ ಮುಸ್ಲಿಂ ಲೀಗ್(ಎನ್) ನಾಯಕನಿಗೆ ಜೀವಾವಧಿ ಶಿಕ್ಷೆ

Update: 2018-07-22 15:41 GMT

ಇಸ್ಲಾಮಾಬಾದ್,ಜು.22: ಪಾಕಿಸ್ತಾನದಲ್ಲಿ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯುಳಿದಿವೆ. ಏತನ್ಮಧ್ಯೆ, ಮಾದಕದ್ರವ್ಯ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ನವಾಝ್ ಶರೀಫ್ ನೇತೃತ್ವದ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಝ್) ಪಕ್ಷದ ನಾಯಕ ಹಾಗೂ ಅಭ್ಯರ್ಥಿ ಹನೀಫ್ ಅಬ್ಬಾಸಿಗೆ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

 ಈ ತೀರ್ಪಿನಿಂದಾಗಿ ಜುಲೈ 25ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಅಬ್ಬಾಸಿ ಅನರ್ಹಗೊಂಡಿದ್ದಾರೆ. ಅವರು ಎನ್‌ಎ-60 ರಾವಲ್ಪಿಂಡಿ ಕ್ಷೇತ್ರದಿಂದ ಅವಾಮಿ ಮುಸ್ಲಿಂ ಲೀಗ್ ಅಭ್ಯರ್ಥಿ ಶೇಕ್ ರಶೀದ್ ವಿರುದ್ಧ ಸ್ಪರ್ಧಿಸಲಿದ್ದರು. ಅಬ್ಬಾಸಿ ವಿರುದ್ಧ ಮಾಡಲಾದ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಮಾದಕದ್ರವ್ಯ ನಿಯಂತ್ರಣ ನ್ಯಾಯಾಲಯ ಶನಿವಾರದಂದು ಅಬ್ಬಾಸಿಯನ್ನು ತಪ್ಪಿತಸ್ಥ ಎಂದು ತೀರ್ಪಿತ್ತು ಶಿಕ್ಷೆ ಪ್ರಕಟಿಸಿದೆ. ಜೀವಾವಧಿ ಕಾರಾಗೃಹ ಶಿಕ್ಷೆಯ ಜೊತೆಗೆ ಒಂದು ಮಿಲಿಯನ್ ರೂ. ದಂಡವನ್ನು ಪಾವತಿಸುವಂತೆಯೂ ನ್ಯಾಯಾಲಯ ಅಬ್ಬಾಸಿಗೆ ಸೂಚಿಸಿದೆ.

ಪ್ರಕರಣದ ಆರೋಪಿಗಳಾದ ಮಾಜಿ ಪ್ರಧಾನಿ ಯೂಸುಫ್ ರಝಾ ಗಿಲಾನಿಯವರ ಪುತ್ರ ಅಲಿ ಮೂಸಾ ಗಿಲಾನಿ, ಮಾಜಿ ಆರೋಗ್ಯ ಸಚಿವ ಮಕ್ದೂಮ್ ಶಹಬುದ್ದೀನ್ ಹಾಗೂ ಇತರ ಐದು ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿ ಬಿಡುಗಡೆಗೆ ಆದೇಶಿಸಿದೆ. ತನ್ನ ಸಂಸ್ಥೆ ಗ್ರೇ ಫಾರ್ಮಸುಟಿಕಲ್ಸ್‌ಗೆ ಪಡೆಯಲಾದ 500 ಕೆ.ಜಿ ಎಫೆಡ್ರೈನ್ ಎಂಬ ನಿಯಂತ್ರಿತ ಮಾದಕವಸ್ತುವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News