ಇಮ್ರಾನ್ ಖಾನ್ ಪಕ್ಷದ ಅಭ್ಯರ್ಥಿಯ ಕಾರಿನ ಮೇಲೆ ಆತ್ಮಾಹುತಿ ದಾಳಿ: ಚಾಲಕ ಸಾವು

Update: 2018-07-22 15:45 GMT

ಪೇಶಾವರ, ಜು.22: ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರಿಕೆ ಇನ್ಸಾಫ್‌ನ ಅಭ್ಯರ್ಥಿಯ ಕಾರಿನ ಮೇಲೆ ರವಿವಾರ ವಾಯುವ್ಯ ಪಾಕಿಸ್ತಾನದ ಡೇರ ಇಸ್ಮೈಲ್ ಖಾನ್ ನಗರದಲ್ಲಿ ಆತ್ಮಾಹುತಿ ದಾಳಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

 ಘಟನೆಯಲ್ಲಿ ಪಿಟಿಐ ಪಕ್ಷದ ಅಭ್ಯರ್ಥಿ ಇಕ್ರಮುಲ್ಲಾ ಗಂಡಪುರ್ ಗಾಯಗೊಂಡಿದ್ದರೆ ಅವರ ಕಾರು ಚಾಲಕ ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಘಟನೆಯಲ್ಲಿ ಇತರ ಐದು ಮಂದಿ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ. ಗಂಡಪುರ್ ತಮ್ಮ ಮನೆಯಿಂದ ಚುನಾವಣಾ ಪ್ರಚಾರ ಸ್ಥಳಕ್ಕೆ ತೆರಳುತ್ತಿದ್ದ ವೇಳೆ ಆತ್ಮಾಹುತಿ ದಾಳಿಕೋರ ಅವರ ಕಾರಿನ ಮೇಲೆರಗಿ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಪರಿಣಾಮವಾಗಿ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟರೆ ಗಂಡಪುರ್ ಹಾಗೂ ಇತರ ಐದು ಮಂದಿ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಝಹೀರ್ ಅಫ್ರೀದಿ ತಿಳಿಸಿದ್ದಾರೆ.

 2014ರಲ್ಲಿ ಪೇಶಾವರದ ಶಾಲೆಯ ಮೇಲೆ ಉಗ್ರರು ದಾಳಿ ನಡೆಸಿ ಮಕ್ಕಳೂ ಸೇರಿ 150ಕ್ಕೂ ಅಧಿಕ ಮಂದಿಯನ್ನು ಹತ್ಯೆ ಮಾಡಿದ ಘಟನೆಯ ನಂತರ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಸಂಬಂಧಿತ ಹಿಂಸಾಚಾರ ಗಣನೀಯವಾಗಿ ಕಡಿಮೆಯಾಗಿತ್ತು. ಶಾಲೆಯ ಮೇಲಿನ ದಾಳಿಯ ನಂತರ ಪಾಕಿಸ್ತಾನ ಸೇನೆ ಅಫ್ಘಾನಿಸ್ತಾನ ಗಡಿಭಾಗದಲ್ಲಿರುವ ಬುಡಕಟ್ಟು ಪ್ರದೇಶಗಳಲ್ಲಿ ಅಡಗಿರುವ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು. ಪಾಕಿಸ್ತಾನದಲ್ಲಿ ಜುಲೈ 25ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕೆ ಇನ್ಸಾಫ್ ಪಕ್ಷ ರಾಷ್ಟ್ರೀಯವಾಗಿ ಇತರ ಪಕ್ಷಗಳಿಗಿಂತ ಮೇಲುಗೈ ಸಾಧಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News