ಚಡ್‌ನಲ್ಲಿ ಬೊಕೊ ಹರಮ್ ಉಗ್ರರಿಂದ 18 ಮಂದಿಯ ಹತ್ಯೆ

Update: 2018-07-22 17:46 GMT

ಎನ್ಜಮೆನ, ಜು.22: ಇಲ್ಲಿನ ಲೇಕ್ ಚಡ್ ಪ್ರದೇಶದಲ್ಲಿ ಬೊಕೊ ಹರಮ್ ಸಂಘಟನೆಗೆ ಸೇರಿದ ಉಗ್ರರು ಹದಿನೆಂಟು ಮಂದಿಯನ್ನು ಹತ್ಯೆ ಮಾಡಿರುವುದಾಗಿ ಚಡ್‌ನ ಮಿಲಿಟರಿ ಮೂಲ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ನೈಜೀರಿಯದ ಗಡಿಭಾಗದಲ್ಲಿರುವ ಚಡ್‌ಗೆ ಸೇರಿದ ಗ್ರಾಮಕ್ಕೆ ಹೊಕ್ಕ ಉಗ್ರರು ಅಲ್ಲಿ ಹದಿನೆಂಟು ಜನರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಸೇನೆ ತಿಳಿಸಿದೆ ಎಂದು ವರದಿಗಳು ತಿಳಿಸಿವೆ. ಹದಿನೆಂಟು ಜನರ ಕತ್ತನ್ನು ಸೀಳಿ ಹತ್ಯೆ ಮಾಡಿರುವ ಉಗ್ರರು ಇಬ್ಬರನ್ನು ಗಾಯಗೊಳಿಸಿದ್ದರೆ ಹತ್ತು ಮಹಿಳೆಯರನ್ನು ಅಪಹರಣ ಮಾಡಿದ್ದಾರೆ.

ನೈಜೀರಿಯದಲ್ಲಿ 2009ರಿಂದ ಬೋಕೊ ಹರಮ್ ಸಂಘಟನೆಯ ಉಗ್ರರು ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದು, ಚಡ್‌ನಲ್ಲೂ ಇವರ ಅಟ್ಟಹಾಸ ಮಿತಿಮೀರಿದೆ. ಸಂಘಟನೆಯ ಉಗ್ರರು ನೈಜೀರಿಯದಲ್ಲಿ ಕನಿಷ್ಟ 20,000 ಜನರನ್ನು ಹತ್ಯೆ ಮಾಡಿದ್ದಾರೆ ಮತ್ತು ಎರಡು ಮಿಲಿಯನ್‌ಗಿಂತಲೂ ಅಧಿಕ ಜನರನ್ನು ನಿರಾಶ್ರಿತಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಉಗ್ರರ ವಿರುದ್ಧ ನೈಜೀರಿಯ ಸಾರಿರುವ ಸೇನಾ ಕಾರ್ಯಾಚರಣೆಯಲ್ಲಿ ಚಡ್, ಕ್ಯಾಮರೂನ್ ಮತ್ತು ನೈಗರ್ ಕೂಡಾ ಕೈಜೋಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News