ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ದಾಳಿ: ಹನ್ನೊಂದು ಸಾವು

Update: 2018-07-22 17:52 GMT

ಕಾಬೂಲ್, ಜು.22: ಅಫ್ಘಾನಿಸ್ತಾನದ ಕಾಬೂಲ್‌ನ ವಿಮಾನ ನಿಲ್ದಾಣದ ಸಮೀಪ ನಡೆದ ಆತ್ಮಾಹುತಿ ದಾಳಿಯಲ್ಲಿ ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡಿದ್ದರೆ ಹದಿನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಅಫ್ಘಾನ್ ಉಪಾಧ್ಯಕ್ಷ ರಶೀದ್ ದೋಸ್ತಮ್ ಒಂದು ವರ್ಷಕ್ಕೂ ಅಧಿಕ ಸಮಯದ ನಂತರ ದೇಶಕ್ಕೆ ಮರಳಿದ ಕೆಲವೇ ನಿಮಿಷಗಳ ನಂತರ ಈ ಘಟನೆ ನಡೆದಿದೆ. ರವಿವಾರ ದೋಸ್ತಮ್ ಅವರ ಬೆಂಬಲಿಗರು ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದ ಸಂದರ್ಭದಲ್ಲಿ ನಿಲ್ದಾಣದ ಮುಖ್ಯ ಪ್ರವೇಶ ದ್ವಾರದ ಬಳಿ ಆತ್ಮಾಹುತಿ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಾಹುತಿ ದಾಳಿಕೋರನನ್ನು ಪೊಲೀಸರು ಪತ್ತೆಮಾಡಿದರೂ ಅವರು ಹಿಡಿಯುವುದಕ್ಕೂ ಮುನ್ನ ಆತ ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಸ್ಫೋಟಕವನ್ನು ಸ್ಫೋಟಿಸಿದ್ದಾಗಿ ಆಂತರಿಕ ವ್ಯವಹಾರಗಳ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ. ಘಟನೆಯಲ್ಲಿ ಒಂದು ಮಗು ಹಾಗೂ ಓರ್ವ ಭದ್ರತಾ ಸಿಬ್ಬಂದಿ ಸೇರಿದಂತೆ ಹನ್ನೊಂದು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಹಲವು ಮಾನವಹಕ್ಕುಗಳ ಉಲ್ಲಂಘನೆ ಆರೋಪಗಳನ್ನು ಎದುರಿಸುತ್ತಿದ್ದ ಉಪಾಧ್ಯಕ್ಷ ರಶೀದ್ ದೋಸ್ತಮ್ 2017ರ ಮೇನಲ್ಲಿ ದೇಶ ತ್ಯಜಿಸಿ ಟರ್ಕಿಗೆ ತೆರಳಿ ಅಲ್ಲಿಯೇ ನೆಲೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News