ಫೆಲೆಸ್ತೀನ್ ಬಾಲಕನ ಗುಂಡಿಕ್ಕಿ ಕೊಂದ ಇಸ್ರೇಲ್ ಸೈನಿಕರು
Update: 2018-07-23 21:56 IST
ಬೆತ್ಲೆಹೇಮ್ (ಫೆಲೆಸ್ತೀನ್), ಜು. 23: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ರವಿವಾರ ರಾತ್ರಿ ನಡೆಸಿದ ದಾಳಿಯಲ್ಲಿ, ಇಸ್ರೇಲಿ ಸೈನಿಕರು ಓರ್ವ ಫೆಲೆಸ್ತೀನ್ ಬಾಲಕನನ್ನು ಕೊಂದಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ.
ಪಶ್ಚಿಮ ದಂಡೆಯ ದಕ್ಷಿಣ ಭಾಗದಲ್ಲಿರುವ ಬೆತ್ಲೆಹೇಮ್‌ನಲ್ಲಿರುವ ನಿರಾಶ್ರಿತ ಶಿಬಿರವೊಂದರಲ್ಲಿ ನಡೆದ ಘರ್ಷಣೆಯ ವೇಳೆ ಇಸ್ರೇಲ್ ಸೈನಿಕರು 15 ವರ್ಷದ ಬಾಲಕನ ಎದೆಗೆ ಗುಂಡು ಹಾರಿಸಿದರು ಎಂದು ಅದು ತಿಳಿಸಿದೆ.
ಘಟನೆಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಸೇನೆ, ತನ್ನ ಸೈನಿಕರು ಶಿಬಿರಕ್ಕೆ ನುಗ್ಗಿ, ‘ಭಯೋತ್ಪಾದಕ ಚಟುವಟಿಕೆ’ ನಡೆಸುತ್ತಿದ್ದಾರೆನ್ನಲಾದ ಇಬ್ಬರನ್ನು ಬಂಧಿಸಿದೆ ಎಂದು ಹೇಳಿದೆ.
‘‘ಕಾರ್ಯಾಚರಣೆಯ ವೇಳೆ ಹಿಂಸಾತ್ಮಕ ಪ್ರತಿಭಟನೆ ನಡೆಯಿತು ಹಾಗೂ ಸೈನಿಕರ ಮೇಲೆ ಕಲ್ಲು, ಬೆಂಕಿ ಬಾಂಬ್ ಮತ್ತು ಗ್ರೆನೇಡ್‌ಗಳನ್ನು ಎಸೆಯಲಾಯಿತು ಹಾಗೂ ಸೈನಿಕರು ಪ್ರತಿಭಟನಕಾರರ ಮೇಲೇ ಗುಂಡು ಹಾರಿಸಿದರು’’ ಎಂದು ಇಸ್ರೇಲ್ ಸೇನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.