×
Ad

ಕ್ರಿಕೆಟಿಗನಾಗಿ ಇಮ್ರಾನ್ ಖಾನ್ ಸಾಧನೆಯ ಹಿನ್ನೋಟ

Update: 2018-07-26 23:54 IST

   ಹೊಸದಿಲ್ಲಿ, ಜು.26: ಪಾಕಿಸ್ತಾನದ ನೂತನ ಪ್ರಧಾನಮಂತ್ರಿಯಾಗಲು ಸಜ್ಜಾಗಿರುವ ಇಮ್ರಾನ್ ಖಾನ್ ಪಾಕ್ ಕಂಡ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗ. ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕ್‌ನ ಅತ್ಯಂತ ಯಶಸ್ವಿ ನಾಯಕರಾಗಿದ್ದ ಅವರು 75 ಪಂದ್ಯಗಳಲ್ಲಿ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಸ್ಬಾವುಲ್ ಹಕ್ ಬಳಿಕ ಎರಡನೇ ಯಶಸ್ವಿ ನಾಯಕನಾಗಿದ್ದಾರೆ. ಖಾನ್ ನಾಯಕತ್ವದಲ್ಲೇ ಪಾಕ್ 1992ರಲ್ಲಿ ಚೊಚ್ಚಲ ವಿಶ್ವಕಪ್ ಜಯಿಸಿ ಅಚ್ಚರಿ ಮೂಡಿಸಿತ್ತು. ಇಮ್ರಾನ್ ಕ್ರಿಕೆಟ್ ಜೀವನದ ಪ್ರಮುಖ ಸಾಧನೆಯ ಹಿನ್ನೋಟ ಇಂತಿದೆ...

 ► ಪಾಕಿಸ್ತಾನ 1992ರಲ್ಲಿ ವಿಶ್ವಕಪ್ ಗೆಲ್ಲಲು ನಾಯಕತ್ವ: ಸ್ವದೇಶದಲ್ಲಿ 1987ರಲ್ಲಿ ನಡೆದಿದ್ದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಪಾಕ್ ತಂಡ ಸೋತಾಗ ಇಮ್ರಾನ್ ಖಾನ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಆದರೆ, ಆಲ್‌ರೌಂಡರ್ ಖಾನ್ 1988ರಲ್ಲಿ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದರು. 1992ರಲ್ಲಿ ಆಸ್ಟ್ರೇಲಿಯ-ನ್ಯೂಝಿಲೆಂಡ್‌ನ ಜಂಟಿ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಪಾಕ್ ತಂಡ ಗ್ರೂಪ್ ಹಂತ ದಾಟುತ್ತದೆಯೆಂದು ಯಾರೂ ನಿರೀಕ್ಷಿಸಿರಲಿಲ್ಲ. ಟೂರ್ನಿಯಲ್ಲಿ ಕಳಪೆ ಆರಂಭ ಪಡೆದ ಹೊರತಾಗಿಯೂ ಖಾನ್ ನಾಯಕತ್ವದಲ್ಲಿ ದಿಟ್ಟ ಪ್ರದರ್ಶನ ನೀಡಿದ್ದ ಪಾಕ್ ರೌಂಡ್ ರಾಬಿನ್ ಹಂತದಲ್ಲಿ 4ನೇ ಸ್ಥಾನ ಪಡೆದು ಸೆಮಿ ಫೈನಲ್‌ಗೆ ತಲುಪಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 72 ರನ್ ಗಳಿಸಿದ್ದ ಖಾನ್ ತಂಡಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟಿದ್ದರು.

► ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ ಮೊದಲಿಗ: ವೇಗ ಹಾಗೂ ಸ್ವಿಂಗ್ ಬೌಲಿಂಗ್‌ನ ಮೂಲಕ ಬ್ಯಾಟ್ಸ್‌ಮನ್‌ಗಳ ಎದೆ ನಡುಗಿಸುತ್ತಿದ್ದ ಖಾನ್ 300 ಟೆಸ್ಟ್ ವಿಕೆಟ್ ಪಡೆದ ಪಾಕ್‌ನ ಮೊದಲ ಬೌಲರ್. 1987ರಲ್ಲಿ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದ್ದರು. ಈ ಸಾಧನೆ ಮಾಡಲು ಖಾನ್ 68 ಟೆಸ್ಟ್ ಪಂದ್ಯ ಆಡಿದ್ದರು. ಒಟ್ಟು 362 ಟೆಸ್ಟ್ ವಿಕೆಟ್ ಪಡೆದಿರುವ ಖಾನ್ ಪ್ರಸ್ತುತ ಪಾಕ್ ಪರ ಗರಿಷ್ಠ ವಿಕೆಟ್ ಪಡೆದಿರುವ ಎರಡನೇ ವೇಗದ ಬೌಲರ್.

► 300 ವಿಕೆಟ್ ಹಾಗೂ 3,000 ರನ್: ಓರ್ವ ಶ್ರೇಷ್ಠ ಬೌಲರ್ ಆಗಿ ಪ್ರಸಿದ್ದಿ ಪಡೆದಿದ್ದ ಖಾನ್ ತನ್ನ ಬ್ಯಾಟಿಂಗ್ ಕೌಶಲ್ಯದಿಂದಾಗಿ 88 ಟೆಸ್ಟ್ ಪಂದ್ಯಗಳಲ್ಲಿ 3,807 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 300 ಕ್ಕೂ ಅಧಿಕ ವಿಕೆಟ್ ಹಾಗೂ 3 ಸಾವಿರಕ್ಕೂ ಅಧಿಕ ರನ್ ಗಳಿಸಿದ ವಿಶ್ವದ 8 ಕ್ರಿಕೆಟಿಗರಲ್ಲಿ ಓರ್ವರಾಗಿದ್ದಾರೆ. ತನ್ನ 75ನೇ ಟೆಸ್ಟ್ ಪಂದ್ಯದಲ್ಲಿ ಖಾನ್ ಈ ಸಾಧನೆ ಮಾಡಿದ್ದರು. ಇಯಾನ್ ಬೋಥಂ ಬಳಿಕ(72 ಪಂದ್ಯ)ವೇಗವಾಗಿ ಈ ಮೈಲುಗಲ್ಲು ತಲುಪಿದ ಸಾಧನೆ ಮಾಡಿದ್ದಾರೆ.

► ಭಾರತದಲ್ಲಿ ಏಕೈಕ ಟೆಸ್ಟ್ ಸರಣಿ ಗೆಲುವಿನಲ್ಲಿ ನಾಯಕತ್ವ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕ್ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾದರೆ ಸಾಧ್ಯವಾದಷ್ಟು ಶ್ರೇಷ್ಠ ಪ್ರದರ್ಶನ ನೀಡಲು ಯತ್ನಿಸುತ್ತವೆ. 1987ರಲ್ಲಿ ಪಾಕ್ ತಂಡ ಇಮ್ರಾನ್ ನಾಯಕತ್ವದಲ್ಲಿ ಭಾರತದಲ್ಲಿ ಮೊದಲ ಬಾರಿ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತ್ತು. ಬೆಂಗಳೂರಿನಲ್ಲಿ ನಡೆದ 5 ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಪಾಕ್ ತಂಡ 16 ರನ್‌ಗಳ ಜಯ ಸಾಧಿಸಿತ್ತು. ಈ ಪಂದ್ಯ ಸುನೀಲ್ ಗವಾಸ್ಕರ್‌ರ ವಿದಾಯದ ಪಂದ್ಯವಾಗಿತ್ತು. ವೆಸ್ಟ್‌ಇಂಡೀಸ್ ನೆಲದಲ್ಲಿ ಜಯಭೇರಿ: ವೆಸ್ಟ್‌ಇಂಡೀಸ್ 1978ರಿಂದ 1988ರ ತನಕ 10 ವರ್ಷಗಳ ಕಾಲ ಸ್ವದೇಶಿ ನೆಲದಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿತ್ತು. ಈ ಹತ್ತು ವರ್ಷಗಳಲ್ಲಿ ವಿಂಡೀಸ್ 25 ಟೆಸ್ಟ್ ಪಂದ್ಯಗಳನ್ನು ಆಡಿತ್ತು. 15ರಲ್ಲಿ ಜಯ, 10ರಲ್ಲಿ ಡ್ರಾ ಸಾಧಿಸಿತ್ತು. 1988ರಲ್ಲಿ ನಿವೃತ್ತಿ ನಿರ್ಧಾರವನ್ನು ಹಿಂಪಡೆದಿದ್ದ ಇಮ್ರಾನ್ ಖಾನ್ ಪಾಕಿಸ್ತಾನ ತಂಡ ವಿಂಡೀಸ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಲು ನಾಯಕತ್ವವಹಿಸಿದ್ದರು. ಗಯಾನದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಇಮ್ರಾನ್ ಒಟ್ಟು 11 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಸಾಹಸಕ್ಕೆ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಪಾಕ್ ಸರಣಿಯ ಕೊನೆಯ ಪಂದ್ಯವನ್ನು ಸೋತಿದ್ದರೂ ಕೆರಿಬಿಯನ್ ನಾಡಿನಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News