ಇಂಗ್ಲೆಂಡ್ ಬಾರ್ಮಿ ಆರ್ಮಿಯಿಂದ ವಿರಾಟ್ ಕೊಹ್ಲಿಗೆ ಪ್ರಶಸ್ತಿ
Update: 2018-07-26 23:59 IST
ಲಂಡನ್, ಜು.26: ಇಂಗ್ಲೆಂಡ್‌ನ ಬಾರ್ಮಿ ಆರ್ಮಿ ಭಾರತ ನಾಯಕ ವಿರಾಟ್ ಕೊಹ್ಲಿಗೆ ವರ್ಷದ ಅಂತರ್‌ರಾಷ್ಟ್ರೀಯ ಆಟಗಾರ ಪ್ರಶಸ್ತಿ ನೀಡಿ ಗೌರವಿಸಿದೆ.
ಬುಧವಾರ ಎಸೆಕ್ಸ್ ವಿರುದ್ಧ ಅಭ್ಯಾಸ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಬಾರ್ಮಿ ಆರ್ಮಿ ಕೊಹ್ಲಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಬಾರ್ಮಿ ಆರ್ಮಿ ಎನ್ನುವುದು ಇಂಗ್ಲೆಂಡ್ ಕ್ರಿಕೆಟ್ ಬೆಂಬಲಿಗರ ಜನಪ್ರಿಯ ಫ್ಯಾನ್ ಕ್ಲಬ್ ಆಗಿದೆ. ಈ ಕ್ಲಬ್ ಕಳೆದ ವರ್ಷ ಕೊಹ್ಲಿಯ ವೀಡಿಯೊವನ್ನು ಹಂಚಿಕೊಂಡಿತ್ತು. ಕೊಹ್ಲಿ ಪ್ರಶಸ್ತಿಯನ್ನು ಹಿಡಿದುಕೊಂಡಿರುವ ದೃಶ್ಯವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಎಸೆಕ್ಸ್ ವಿರುದ್ಧ ತ್ರಿದಿನ ಅಭ್ಯಾಸ ಪಂದ್ಯದ ಮೊದಲ ದಿನ ಅರ್ಧಶತಕವನ್ನು ಸಿಡಿಸಿರುವ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಆಗಸ್ಟ್ 1 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಉತ್ತಮ ತಯಾರಿ ನಡೆಸುತ್ತಿದ್ದಾರೆ. ಕೊಹ್ಲಿ 2014ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ರನ್ ಗಳಿಸಲು ಪರದಾಟ ನಡೆಸಿದ್ದರು.