×
Ad

ಗವಾಸ್ಕರ್ ಮೊಣಕಾಲು ಮುರಿದ ಬೋಥಮ್ ಹೊಡೆತ !

Update: 2018-07-28 23:53 IST

ಲಂಡನ್, ಜು.28: ಇಂಗ್ಲೆಂಡ್‌ಗೆ ಭಾರತ ಪ್ರವಾಸ ಆರಂಭಿಸಿ 39 ವರ್ಷಗಳ ಬಳಿಕ ಮೊದಲ ಬಾರಿ ಟೆಸ್ಟ್ ಸರಣಿ ಜಯಿಸಿತ್ತು. 1971ರಲ್ಲಿ 1-0 ಸರಣಿ ಗೆಲುವಿನೊಂದಿಗೆ ತವರಿಗೆ ವಾಪಸಾಗಿದ್ದ ಭಾರತಕ್ಕೆ ನಾಲ್ಕು ವರ್ಷಗಳ ಬಳಿಕ ಅದೇ ಯಶಸ್ಸನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

1974ರಲ್ಲಿ ಭಾರತ ಪ್ರವಾಸ ಕೈಗೊಂಡು 3 ಟೆಸ್ಟ್ ಗಳ ಪ್ರವಾಸ ಸರಣಿಯನ್ನು ಆಡಿತ್ತು. ಆದರೆ ಗೆಲುವು ಸಾಧ್ಯವಾಗಲಿಲ್ಲ. ಅಜಿತ್ ವಾಡೇಕರ್ ನಾಯಕತ್ವದ ತಂಡ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತ್ತು. 0-3 ಅಂತರದಲ್ಲಿ ಸೋಲು ಅನುಭವಿಸಿ ವಾಪಸಾಗಿತ್ತು.

ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸುನೀಲ್ ಗವಾಸ್ಕರ್ ಶತಕ ದಾಖಲಿಸಿದ್ದರು. ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ಎರಡನೇ ಇನಿಂಗ್ಸ್ ನಲ್ಲಿ ಭಾರತ 42 ರನ್‌ಗಳಿಗೆ ಆಲೌಟಾಗಿತ್ತು.

ಬರ್ಮಿಂಗ್‌ಹ್ಯಾಮ್‌ನಲ್ಲಿ ಕೊನೆಯ ಟೆಸ್ಟ್‌ನಲ್ಲಿ ಭಾರತ ಇನಿಂಗ್ಸ್ ಸೋಲು ಅನುಭವಿಸಿತ್ತು.

 1979ರಲ್ಲಿ ಮತ್ತೆ ಭಾರತಕ್ಕೆ ಸರಣಿ ಸೋಲು

ವೆಂಕಟರಾಘವನ್ ನಾಯಕತ್ವದಲ್ಲಿ ಭಾರತದ ಕ್ರಿಕೆಟ್ ತಂಡ 1979ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡು 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿತ್ತು. ಆದರೆ ಭಾರತಕ್ಕೆ ಗೆಲುವು ಸಾಧ್ಯವಾಗಲಿಲ್ಲ. 4 ಟೆಸ್ಟ್‌ಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಜಯ ಗಳಿಸಿತು.

ಬರ್ಮಿಂಗ್ ಹ್ಯಾಮ್‌ನಲ್ಲಿ ಮೊದಲ ಟೆಸ್ಟ್‌ನಲ್ಲಿ ಭಾರತ ಸೋಲು ಅನುಭವಿಸಿತು. ಲಾರ್ಡ್ಸ್ , ಲೀಡ್ಸ್ ಮತ್ತು ಓವಲ್‌ನಲ್ಲಿ ನಡೆದ 2 , 3 ಮತ್ತು 4ನೇ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತು.

   ಓವಲ್‌ನಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶ ಇತ್ತು. ಸುನೀಲ್ ಗವಾಸ್ಕರ್ ಆಕರ್ಷಕ 221 ರನ್ ಗಳಿಸಿದ್ದರು. ಗೆಲುವಿಗೆ 438 ರನ್‌ಗಳ ಸವಾಲನ್ನು ಪಡೆದ ಭಾರತ ಗವಾಸ್ಕರ್ ದ್ವಿಶತಕದ ನೆರವಿನಲ್ಲಿ ಗೆಲುವಿನ ಕಡೆಗೆ ಹೆಜ್ಜೆ ಇರಿಸಿತ್ತು. ಇಂಗ್ಲೆಂಡ್‌ಗೆ ಇದು ಅನಿರೀಕ್ಷಿತವಾಗಿತ್ತು. ಗವಾಸ್ಕರ್ ಹೋರಾಟ ಇಂಗ್ಲೆಂಡ್‌ನ ಗೆಲುವಿನ ಆಸೆಗೆ ಅಡ್ಡಿಪಡಿಸಿತ್ತು. ಗವಾಸ್ಕರ್ ನಿರ್ಗಮಿಸುವ ಹೊತ್ತಿಗೆ ಭಾರತದ ಗೆಲುವಿಗೆ 51 ರನ್‌ಗಳ ಆವಶ್ಯಕತೆ ಇತ್ತು. ಆದರೆ ತಂಡದ ಖಾತೆಗೆ 41 ರನ್ ಸೇರುವಷ್ಟರಲ್ಲಿ ಉಳಿದೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡ ಭಾರತ 9 ರನ್‌ಗಳ ಸೋಲು ಅನುಭವಿಸಿತು. ಸರಣಿಯನ್ನು 1-1 ಅಂತರದಲ್ಲಿ ಸಮಬಲ ಸಾಧಿಸುವ ಭಾರತದ ಪ್ರಯತ್ನ ಯಶಸ್ವಿಯಾಗಲಿಲ್ಲ. ಗವಾಸ್ಕರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಸೋಲಿನ ಹಿನ್ನೆಲೆಯಲ್ಲಿ ನಾಯಕ ವೆಂಕಟರಾಘವನ್ ನಾಯಕತ್ವ ಕಳೆದುಕೊಂಡರು. ಗವಾಸ್ಕರ್‌ಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು.

1982ರಲ್ಲಿ ಸೋಲಿಗೆ ಸೇಡು ತೀರಿಸಿದ ಆಂಗ್ಲರು

   

           1982ರಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿತ್ತು. ಬಳಿಕ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಸೇಡು ತೀರಿಸಿಕೊಂಡಿತು. ಜೂನ್ 2ರಿಂದ ಜುಲೈ 13ರ ತನಕ ನಡೆದ ಪ್ರವಾಸ ಸರಣಿಯಲ್ಲಿ 2 ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ 2-0 ಜಯ ದಾಖಲಿಸಿತು. 3 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿತು. ಮೊದಲ ಟೆಸ್ಟ್‌ನಲ್ಲಿ ದಿಲೀಪ್ ವೆಂಗ್‌ಸರ್ಕಾರ್ ಶತಕ ದಾಖಲಿಸಿದರು. ಆದರೆ ಭಾರತದ ಸೋಲು ತಪ್ಪಲಿಲ್ಲ. ಮ್ಯಾಂಚೆಸ್ಟರ್‌ನಲ್ಲಿ ಎರಡನೇ ಟೆಸ್ಟ್‌ಗೆ ಮಳೆ ಅಡ್ಡಿಪಡಿಸಿತು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಓವಲ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಇಯಾನ್ ಬೋಥಮ್ 220 ಎಸೆತಗಳಲ್ಲಿ ವೇಗದ ದ್ವಿಶತಕ ದಾಖಲಿಸಿದರು. 1982 ಜುಲೈ 8ರಂದು ಟೆಸ್ಟ್‌ನ ಮೊದಲ ದಿನ ಬೋಥಮ್ ಬಾರಿಸಿದ ಚೆಂಡು ಸಿಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್‌ನಲ್ಲಿದ್ದ ಸುನೀಲ್ ಗವಾಸ್ಕರ್ ಮೊಣಕಾಲಿಗೆ ಬಡಿಯಿತು. ಗವಾಸ್ಕರ್ ಗಾಯಗೊಂಡು ಕ್ರೀಡಾಂಗಣ ತೊರೆದರು. ಈ ಕಾರಣದಿಂದಾಗಿ ಗವಾಸ್ಕರ್ ಬ್ಯಾಟಿಂಗ್ ನಡೆಸಲಿಲ್ಲ. ಗವಾಸ್ಕರ್ ಗಾಯಾಳುವಾಗಿ ಭಾರತಕ್ಕೆ ವಾಪಸಾಗಿದ್ದರು. ಭಾರತದ ಆಲ್‌ರೌಂಡರ್ ಕಪಿಲ್ ದೇವ್ ಮೊದಲ ಇನಿಂಗ್ಸ್‌ನಲ್ಲಿ 3 ರನ್‌ನಿಂದ ಶತಕ ವಂಚಿತಗೊಂಡರು. ಅವರು 97 ರನ್(93ಎ, 14ಬೌ,2ಸಿ) ಗಳಿಸಿ ಔಟಾದರು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. (ಮುಂದುವರಿಯುವುದು)..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News