ಪ್ರತಿಷ್ಟಿತ ಕಾಂಟಿನೆಂಟಲ್ ಕಪ್
ಹೊಸದಿಲ್ಲಿ, ಜು.28: ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹಾಗೂ ಓಟಗಾರ್ತಿ ಹಿಮಾ ದಾಸ್ ಸಹಿತ ಭಾರತದ ಏಳು ಅಥ್ಲೀಟ್‌ಗಳು ಝೆಕ್ ಗಣರಾಜ್ಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ಐಎಎಎಫ್ ಕಾಂಟಿನೆಂಟಲ್ ಕಪ್‌ನಲ್ಲಿ ಸ್ಪರ್ಧಿಸಲಿದ್ದಾರೆ.
ಐಎಎಎಫ್ ಕಾಂಟಿನೆಂಟಲ್ ಕಪ್ ಝೆಕ್ ಗಣರಾಜ್ಯದ ಒಸ್ಟ್ರಾವಾದಲ್ಲಿ ಸೆ.8 ಹಾಗೂ 9 ರಂದು ನಡೆಯಲಿದೆ.
ಏಶ್ಯನ್ ಅಥ್ಲೆಟಿಕ್ಸ್ ಸಂಸ್ಥೆ(ಎಎಎ)ಇಂಟರ್‌ನ್ಯಾಶನಲ್ ಅಸೋಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ ಕಾಂಟಿನೆಂಟಲ್ ಕಪ್‌ನ್ನು ಪ್ರತಿನಿಧಿಸಲು ಭಾರತದ ಅಗ್ರ ಏಳು ಅಥ್ಲೀಟ್‌ಗಳನ್ನು ಆಯ್ಕೆ ಮಾಡಿದೆ. ಈಗಿನ ಐಎಎಎಫ್ ವರ್ಲ್ಡ್ ರ್ಯಾಂಕಿಂಗ್‌ನ್ನು ಆಧರಿಸಿ ನೀರಜ್(ಜಾವೆಲಿನ್), ಮುಹಮ್ಮದ್ ಅನಾಸ್(400ಮೀ.), ಜಿನ್ಸನ್ ಜಾನ್ಸನ್(800 ಮೀ.) ಹಾಗೂ ಅರ್ಪಿಂದರ್ ಸಿಂಗ್(ತ್ರಿಪಲ್ ಜಂಪ್)ಪುರುಷರ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ಹಿಮಾ ದಾಸ್(400 ಮೀ.), ಪಿ.ಯು. ಚಿತ್ರಾ(1,500 ಮೀ.) ಹಾಗೂ ಸುಧಾ ಸಿಂಗ್(3,000 ಮೀ. ಸ್ಟೀಪಲ್‌ಚೇಸ್) ಮಹಿಳಾ ವಿಭಾಗಕ್ಕೆ ಸೇರ್ಪಡೆಯಾಗಿದ್ದಾರೆ.
ನೀರಜ್ ಪ್ರಸ್ತುತ ಫಿನ್‌ಲ್ಯಾಂಡ್‌ನಲ್ಲಿ ರಾಷ್ಟ್ರೀಯ ಜಾವೆಲಿನ್ ಕೋಚ್ ಜರ್ಮನಿಯ ಯುವೆ ಹಾನ್ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಅನಾಸ್ ಹಾಗೂ ಹಿಮಾ ಝೆಕ್ ಗಣರಾಜ್ಯದಲ್ಲಿ ಗಲಿನಾ ಬುಖಾರಿನಾರೊಂದಿಗೆ ಇತರ ಅಥ್ಲೀಟ್‌ಗಳ ಜೊತೆ ಮುಂದಿನ ತಿಂಗಳು ನಡೆಯುವ ಏಶ್ಯನ್ ಗೇಮ್ಸ್‌ಗೆ ತಯಾರಿ ನಡೆಸುತ್ತಿದ್ದಾರೆ. ಜಾನ್ಸನ್ ಹಾಗೂ ಸುಧಾ ಸಿಂಗ್ ಭೂತಾನ್‌ನಲ್ಲಿ ರಾಷ್ಟ್ರೀಯ ಶಿಬಿರದಲ್ಲಿ ತರಬೇತಿ ನಿರತರಾಗಿದ್ದಾರೆ. ಐಎಎಎಫ್ ಕಾಂಟಿನೆಂಟಲ್ ಕಪ್ 2010ರಲ್ಲಿ ಆರಂಭವಾಗಿದ್ದು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತಿದೆ. ಆಫ್ರಿಕ, ಅಮೆರಿಕ, ಏಶ್ಯನ್-ಪೆಸಿಫಿಕ್ ಹಾಗೂ ಯುರೋಪ್‌ನ ಶ್ರೇಷ್ಠ ಅಥ್ಲೀಟ್‌ಗಳನ್ನು ಒಳಗೊಂಡ ನಾಲ್ಕು ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ.