×
Ad

ಇಂದಿನಿಂದ ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪಿಯನ್‌ಶಿಪ್

Update: 2018-07-29 23:49 IST

ನಾನ್‌ಜಿಂಗ್(ಚೀನಾ), ಜು.29: ಚೀನಾದ ನಾನ್‌ಜಿಂಗ್‌ನಲ್ಲಿ ಸೋಮವಾರ ಪ್ರತಿಷ್ಠಿತ ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪಿಯನ್‌ಶಿಪ್ ಟೂರ್ನಮೆಂಟ್ ಆರಂಭಗೊಳ್ಳಲಿದೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಜಯಿಸಿದ ಪಿ.ವಿ. ಸಿಂಧು, ಪುರುಷರ ಸಿಂಗಲ್ಸ್ ನಲ್ಲಿ ಕೆ.ಶ್ರೀಕಾಂತ್ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

 ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ 2013 ಮತ್ತು 2014ರಲ್ಲಿ ಕಂಚು ಜಯಿಸಿದ್ದ ಸಿಂಧು ಅವರು ಕಳೆದ ವರ್ಷ ಬೆಳ್ಳಿ ಪಡೆದಿದ್ದರು.

 ಜಪಾನ್‌ನ ನೊರೊಮಿ ಒಕುಹರಾ ವಿರುದ್ಧ ಸಿಂಧು ಬೆಳ್ಳಿ ತನ್ನದಾಗಿಸಿಕೊಂಡಿದ್ದರು.

ಸಿಂಧು ಮತ್ತು ನೊರೊಮಿ ನಡುವೆ ಸುಮಾರು 110 ನಿಮಿಷಗಳ ಕಾಲ ಜಿದ್ದಾಜಿದ್ದಿನ ಹೋರಾಟ ನಡೆದಿತ್ತು.

ಹೈದರಾಬಾದ್‌ನ 23ರ ಹರೆಯದ ಸಿಂಧು ಕಳೆದ ವರ್ಷ 6 ಟೂರ್ನಮೆಂಟ್‌ಗಳಲ್ಲಿ ಫೈನಲ್ ತಲುಪಿದ್ದರು. ಈ ಪೈಕಿ ಇಂಡಿಯಾ ಓಪನ್, ಕೊರಿಯಾ ಓಪನ್ ಮತ್ತು ಸೈಯದ್ ಮೋದಿ ಇಂಟರ್‌ನ್ಯಾಶನಲ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ವರ್ಲ್ಡ್ ಚಾಂಪಿಯನ್‌ಶಿಪ್, ದುಬೈ ಸೂಪರ್ ಸಿರೀಸ್ ಮತ್ತು ಹಾಂಕಾಂಗ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದರು.

ಈ ಬಾರಿ ಸಿಂಧು ಇಂಡಿಯಾ ಓಪನ್, ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಿದ್ದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.

 ಸಿಂಧು ಈ ಬಾರಿ ವರ್ಲ್ಡ್ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಕೊರಿಯಾದ ಸಂಗ್ ಜಿ ಹ್ಯೂನ್‌ರನ್ನು ಎದುರಿಸುವ ಸಾಧ್ಯತೆಯಿದೆ.

ಸಿಂಧುಗೆ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ನೊರೊಮಿ ಒಕುಹರಾ ಸವಾಲು ಎದುರಾಗುವ ನಿರೀಕ್ಷೆ ಇದೆ.

 ‘‘ನಾನು ನಿಜವಾಗಿಯೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸಿರುವೆ. ಅದಕ್ಕಾಗಿ ಚೆನ್ನಾಗಿ ತಯಾರಿ ನಡೆಸುತ್ತಿದ್ದೇನೆ. ಆದರೆ ಈ ಬಾರಿ ನನಗೆ ಕಠಿಣ ಸವಾಲು ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಶಸ್ತಿ ಸುತ್ತು ತಲುಪಲು ಕಠಿಣ ಪ್ರಯತ್ನ ನಡೆಸಬೇಕಾ ಗಿದೆ’’ ಎಂದು ಸಿಂಧು ಹೇಳಿದ್ದಾರೆ.

   ‘‘ಪ್ರತಿಯೊಬ್ಬರು ನನಗೆ ಎದುರಾ ಗಲಿರುವ ನೊರೊಮಿ ಸವಾಲಿನ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ ಜಿ ಹ್ಯೂನ್ ವಿರುದ್ಧ ಮೊದಲ ಸವಾಲನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಅವರು ಉತ್ತಮ ಆಟಗಾರ್ತಿ’’ ಎಂದು ಸಿಂಧು ಅಭಿಪ್ರಾಯಪಟ್ಟರು.

ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಸೈನಾ ನೆಹ್ವಾಲ್ 2015ರಲ್ಲಿ ಬೆಳ್ಳಿ ಮತ್ತು 2017ರಲ್ಲಿ ಕಂಚು ಪದಕ ಪಡೆದಿದ್ದರು. 28ರ ಹರೆಯದ ಸೈನಾ ಅವರಿಗೆ ಮೊದಲ ಪಂದ್ಯದಲ್ಲಿ ಸ್ವಿಸ್‌ನ ಸಬ್ರಿನಾ ಜಾಕ್ಯುಟ್ ಅಥವಾ ಟರ್ಕಿಯ ಅಲಿಯೆ ಡೆಮಿರ್‌ಬಗ್ ಸವಾಲು ಎದುರಾಗುವ ನಿರೀಕ್ಷೆ ಇದೆ. ಮೂರನೇ ಸುತ್ತಿನಲ್ಲಿ ಥಾಯ್ಲೆಂಡ್‌ನ 2013ರ ಚಾಂಪಿಯನ್ ರಚನಾಕ್ ಇಂಥನಾನ್ ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಕರೋಲಿನಾ ಮರಿನ್ ಸವಾಲು ಎದುರಾಗುವ ಸಾಧ್ಯತೆ ಇದೆ. ಪುರುಷರ ಸಿಂಗಲ್ಸ್‌ನಲ್ಲಿ ಕೆ.ಶ್ರೀಕಾಂತ್ ಕಳೆದ ವರ್ಷ 4 ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು. ಪ್ರಸಕ್ತ ಸಾಲಿನಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರಜತ ಪದಕ ಪಡೆದಿದ್ದರು. ಅವರಿಗೆ ವರ್ಲ್ಡ್

  ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯದಲ್ಲಿ ಐರ್ಲೆಂಡ್‌ನ ಹ್ಯಾಟ್ ಎನ್‌ಗುಯೆನ್ ಸವಾಲು ಎದುರಾಗಿದೆ. ಮೂರನೇ ಸುತ್ತಿನಲ್ಲಿ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಸವಾಲು ಎದುರಾಗುವ ಸಾಧ್ಯತೆ ಕಂಡು ಬಂದಿದೆ. ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಬೆಳ್ಳಿ ಜಯಿಸಿದ ಮಲೇಷ್ಯಾದ ಲೀ ಚಾಂಗ್ ವೇ ಅವರು ಅನಾರೋಗ್ಯದ ಕಾರಣದಿಂದಾಗಿ ಟೂರ್ನಿಯಿಂದ ದೂರ ಉಳಿದಿದ್ದಾರೆ. ಈ ಕಾರಣದಿಂದಾಗಿ ಶ್ರೀಕಾಂತ್‌ಗೆ ಈ ಬಾರಿ ಪದಕ ಗೆಲ್ಲಲು ಸುಲಭದ ಅವಕಾಶವಿದೆ.

 ಗಾಯದಿಂದ ಚೇತರಿಸಿಕೊಂಡಿರುವ ಎಚ್.ಎಸ್.ಪ್ರಣಯ್ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯದ ಅಭಿನವ್ ಮನೊಟಾರನ್ನು ಎದುರಿಸುವರು. ಕಳಪೆ ಫಾರ್ಮ್‌ನಲ್ಲಿರುವ ಬಿ. ಸಾಯಿ ಪ್ರಣೀತ್‌ಗೆ ಸ್ಪೇನ್‌ನ ಲೂಯಿಸ್ ಎನ್ರಿಕ್ ಪೆನಾಲ್ವೆರ್ ಮತ್ತು ಸಮೀರ್ ವರ್ಮಾಗೆ ಫ್ರಾನ್ಸ್‌ನ ಲೂಕಸ್ ಕೊರ್ವೆ ಸವಾಲು ಮೊದಲ ಸುತ್ತಿನಲ್ಲಿ ಎದುರಾಗಲಿದೆ.

ಪುರುಷರ ಡಬಲ್ಸ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ ಸಾತ್ವಿಕ್‌ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರಿಗೆ ಒಲಿಂಪಿಕ್ಸ್‌ನಲ್ಲಿ ಕಂಚು ಪಡೆದ ಇಂಗ್ಲೆಂಡ್‌ನ ಮಾರ್ಕಸ್ ಎಲಿಯಾಸ್ ಮತ್ತು ಕ್ರಿಸ್ ಲ್ಯಾಂಗ್ರಿಡೆ ಸವಾಲನ್ನು ಎದುರಿಸುವರು. ಮಹಿಳೆಯರ ಡಬಲ್ಸ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನ ಕಂಚು ಪಡೆದ ಅಶ್ವಿನಿ ಪೊನ್ನಪ್ಪ ಮತ್ತು ಎನ್. ಸಿಕ್ಕಿ ರೆಡ್ಡಿ ಅವರಿಗೆ ಚೀನಾ ತೈಪೆಯ ಚಿಯಾಂಗ್ ಕೈ ಹಿಸ್ನಿ ಮತ್ತು ಹ್ಯಾಂಗ್ ಶಿಹ್ ಹ್ಯಾನ್ ಸವಾಲು ಎದುರಾಗಲಿದೆ. ಪುರುಷರ ಡಬಲ್ಸ್‌ನಲ್ಲಿ ಭಾರತದ ನ್ಯಾಶನಲ್ ಚಾಂಪಿಯನ್‌ಗಳಾದ ಮನು ಅತ್ರಿ ಮತ್ತು ಬಿ.ಸುಮೀತ್ ರೆಡ್ಡಿ , ರಶ್ಯನ್ ಓಪನ್‌ನಲ್ಲಿ ಎರಡನೇ ಸ್ಥಾನ ಪಡೆದ ರೋಹನ್ ಕಪೂರ್ ಮತ್ತು ಕುಹೂ ಗರ್ಗ್ ,ಸೌರಭ್ ಶರ್ಮಾ ಮತ್ತು ಅನುಷ್ಕಾ ಪಾರಿಕ್ ಕಣದಲ್ಲಿದ್ದಾರೆ.

   ಮಹಿಳೆಯರ ಡಬಲ್ಸ್‌ನಲ್ಲಿ ಕುಹೂ ಗರ್ಗ್ ನಿಂಗಿಶಿ ಬ್ಲಾಕ್ ಹಝಾರಿಕಾ , ಜಕ್ಕಂಪುಡಿ ಮೇಘನಾ ಮತ್ತು ಎಸ್.ರಾಮ್ ಸೋರ್ವಿಶಾ , ಸನ್ಯೊಗಿತಾ ಘೋರ್ಪಡೆ ಮತ್ತು ಪ್ರಜಕ್ತಾ ಸಾವಂತ್ ಪದಕದ ಬೇಟೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News