ಸರಕಾರದ ನೆರವಿನ ನಿರೀಕ್ಷೆಯಲ್ಲಿ ಕಾಯಿಲೆಪೀಡಿತ ಏಶ್ಯನ್ ಗೇಮ್ಸ್ ಚಾಂಪಿಯನ್ ಹಕಮ್ ಸಿಂಗ್

Update: 2018-07-29 18:23 GMT

ಬರ್ನಾಲ್, ಜು.29: ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಹಾಗೂ ಧ್ಯಾನ್ ಚಂದ್ ಪ್ರಶಸ್ತಿ ವಿಜೇತ ಹಕಮ್ ಸಿಂಗ್ ಭಟ್ಟಲ್(64 ವರ್ಷ)ಲಿವರ್ ಹಾಗೂ ಕಿಡ್ನಿ ಸಂಬಂಧಿತ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು ಪ್ರಸ್ತುತ ಸಂಗ್ರೂರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬ ಸದಸ್ಯರು ಭಟ್ಟಲ್‌ಗೆ ಅವಶ್ಯವಿರುವ ಚಿಕಿತ್ಸೆ ಒದಗಿಸಲು ಪರದಾಡುತ್ತಿದ್ದಾರೆ. ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಸರಕಾರದಿಂದ ಸಿಗಬೇಕಾದ ಸಹಾಯಹಸ್ತ ಅವರಿಗೆ ಸಿಗುತ್ತಿಲ್ಲ.

 1972ರಲ್ಲಿ ಸೇನೆಗೆ ಸೇರಿದ್ದ ಹಕಮ್ 6 ಸಿಖ್ ರೆಜಿಮೆಂಟ್‌ನಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು. ಇಂದು ಅವರ ಕುಟುಂಬ ಸದಸ್ಯರಿಗೆ ಅವರನ್ನು ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ರಾಜಿಂದರ್ ಕೌರ್ ಭಟ್ಟಲ್ ಅವರ ಹುಟ್ಟೂರಿನಲ್ಲೇ ಹಕಮ್ ಜನಿಸಿದ್ದಾರೆ.

 ಹಕಮ್ 2008ರ ಆಗಸ್ಟ್ 29 ರಂದು ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ರಿಂದ ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿ ಸ್ವೀಕರಿಸಿದ್ದರು. ಹಕಮ್ ಧ್ಯಾನ್‌ಚಂದ್ ಪ್ರಶಸ್ತಿಯ ಜೊತೆಗೆ 5 ಲಕ್ಷ ರೂ. ನಗದು ಬಹುಮಾನ ಪಡೆದಿದ್ದರು.

ಹಕಮ್ ನಿವೃತ್ತಿಯ ಬಳಿಕವೂ ಕ್ರೀಡಾ ವೃತ್ತಿಯಲ್ಲಿ ಸಕ್ರಿಯರಾಗಿದ್ದರು. ಕ್ರೀಡಾ ಬೆಳವಣಿಗೆಗೆ ತನ್ನ ಸೇವೆಯನ್ನು ಮುಂದುವರಿಸಿದ್ದರು. ಹಕಮ್ ಸೇನೆಯಲ್ಲಿ ಹವಾಲ್ದಾರ್ ಆಗಿದ್ದ ಸಮಯದಲ್ಲಿ 1978ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿ ಪುರುಷರ 20 ಮೀ.ನಡಿಗೆಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದರು. 1979ರಲ್ಲಿ ಟೋಕಿಯೊದಲ್ಲಿ ನಡೆದ ಏಶ್ಯನ್ ಟ್ರಾಕ್ ಹಾಗೂ ಫೀಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಹಕಮ್ ತನ್ನ ಉತ್ತಮ ಪ್ರದರ್ಶನ ಪುನರಾವರ್ತಿಸಿದ್ದರು.

ಒಂದು ಮಾರಕ ಅಪಘಾತದ ಬಳಿಕ 1981ರಲ್ಲಿ ಹಕಮ್ ಅನಿವಾರ್ಯವಾಗಿ ಕ್ರೀಡೆಗೆ ವಿದಾಯ ಹೇಳಿದ್ದರು. ಆದರೆ, ಅವರ ಕ್ರೀಡಾವೃತ್ತಿಜೀವನ ಕೊನೆಗೊಂಡಿದ್ದರೂ ಹೊಸ ಪ್ರತಿಭೆಗೆ ಕೋಚಿಂಗ್ ನೀಡುವುದನ್ನು ಮುಂದುವರಿಸಿದ್ದರು. ‘‘1987ರಲ್ಲಿ ಸೇನೆಯಿಂದ ನಿವೃತ್ತಿಯಾದ ಹಕಮ್ 16 ವರ್ಷಗಳ ಕಾಲ ಸಂಕಷ್ಟ ಎದುರಿಸಿದರು. 2003ರಲ್ಲಿ ಪಂಜಾಬ್ ಪೊಲೀಸ್ ಇಲಾಖೆ ಹಕಮ್ ಕೌಶಲ್ಯವನ್ನು ಗುರುತಿಸಿ ಕಾನ್‌ಸ್ಟೇಬಲ್ ಶ್ರೇಣಿಯ ಅಥ್ಲೆಟಿಕ್ಸ್ ಕೋಚ್ ಆಗಿ ನೇಮಕ ಮಾಡಿತು. 2014ರಲ್ಲಿ ಪೊಲೀಸ್ ಇಲಾಖೆಯಿಂದ ನಿವೃತ್ತಿಯಾದರು’’ ಎಂದು ಹಕಮ್ ಪುತ್ರ ಸುಖ್‌ಜಿತ್ ಸಿಂಗ್ ಹೇಳಿದ್ದಾರೆ.

 ‘‘ಈಗ ಕಾಯಿಲೆಗೆ ಒಳಗಾಗಿರುವ ತನ್ನ ಪತಿಯ ಚಿಕಿತ್ಸೆಗೆ ರಾಜ್ಯ ಸರಕಾರ ಯಾವುದೇ ರೀತಿಯ ಆರ್ಥಿಕ ನೆರವು ನೀಡುತ್ತಿಲ್ಲ. ಅವರ ಲಿವರ್ ಬಹುತೇಕ ಹಾನಿಯಾಗಿದೆ’’ ಎಂದು ಹಕಮ್ ಪತ್ನಿ ಬೀಂಟ್ ಕೌರ್ ಹೇಳಿದ್ದಾರೆ.

ಹಕಮ್‌ರನ್ನು ನಾಲ್ಕು ದಿನಗಳ ಹಿಂದೆ ಬರ್ನಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಬಳಿಕ ಸಂಗ್ರೂರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಜಿ ಅಥ್ಲೀಟ್‌ಗೆ ಸಹಾಯಹಸ್ತ ಚಾಚುವಂತೆ ಕೋರಿ ರಾಜ್ಯ ಸರಕಾರಕ್ಕೆ ಮನವಿ ಪತ್ರ ಕಳುಹಿಸಿಕೊಡಲಾಗಿದೆ ಎಂದು ಬರ್ನಾಲ್‌ನ ಉಪ ಆಯುಕ್ತ ಧರ್ಮಪಾಲ್ ಗುಪ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News