ಟೆಸ್ಟ್‌ನಲ್ಲಿ ವೇಗವಾಗಿ 6,000 ರನ್ ಪೂರ್ಣಗೊಳಿಸಿದ ರೂಟ್

Update: 2018-08-01 15:47 GMT

ಬರ್ಮಿಂಗ್‌ಹ್ಯಾಮ್, ಆ.1: ಪ್ರವಾಸಿ ಭಾರತ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 6 ಸಾವಿರ ರನ್ ಪೂರೈಸಿದ ದಾಖಲೆ ಬರೆದಿದ್ದಾರೆ.

ಟೆಸ್ಟ್‌ನ ಮೊದಲ ದಿನವಾಗಿರುವ ಬುಧವಾರ ರೂಟ್ ಅವರು 5 ವರ್ಷ ಮತ್ತು 231 ದಿನಗಳಲ್ಲಿ 6 ಸಾವಿರ ರನ್ ಪೂರ್ಣಗೊಳಿಸುವ ಮೂಲಕ ಇಂಗ್ಲೆಂಡ್‌ನ ಮಾಜಿ ನಾಯಕ ಅಲಿಸ್ಟೈರ್ ಕುಕ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಕುಕ್ 5 ವರ್ಷ ಮತ್ತು 339 ದಿನಗಳಲ್ಲಿ ಈ ಸಾಧನೆ ಮಾಡಿದ್ದರು.

ಇಂಗ್ಲೆಂಡ್‌ನ ಪಾಲಿಗೆ 1,000ನೇ ಟೆಸ್ಟ್ ಎನಿಸಿಕೊಂಡಿರುವ ಭಾರತ ವಿರುದ್ಧದ ಟೆಸ್ಟ್‌ನಲ್ಲಿ ಟಾಸ್ ಜಯಿಸಿದ ನಾಯಕ ರೂಟ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಇಂಗ್ಲೆಂಡ್ 8.5 ಓವರ್‌ಗಳಲ್ಲಿ 13 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ದಾಂಡಿಗ ಕುಕ್ 13 ರನ್ ಗಳಿಸಿ ರವಿಚಂದ್ರನ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕೀಟನ್ ಜೆನ್ನಿಂಗ್ಸ್‌ಗೆ ರೂಟ್ ಜೊತೆಯಾದರು.

ಜೆನ್ನಿಂಗ್ಸ್ 42 ರನ್ ಗಳಿಸಿ ಮುಹಮ್ಮದ್ ಶಮಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಡೇವಿಡ್ ಮಲಾನ್ 8 ರನ್ ಗಳಿಸಿ ಶಮಿ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು.

27ರ ಹರೆಯದ ರೂಟ್ 127ನೇ ಟೆಸ್ಟ್ ಇನಿಂಗ್ಸ್‌ನಲ್ಲಿ 40 ರನ್ ಗಳಿಸುವುದರೊಂದಿಗೆ 6 ಸಾವಿರ ರನ್ ಪೂರೈಸಿದ್ದಾರೆ.

ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 60 ಓವರ್‌ಗಳ ಮುಕ್ತಾಯಕ್ಕೆ 3 ವಿಕೆಟ್ ನಷ್ಟದಲ್ಲಿ 3 ವಿಕೆಟ್ ನಷ್ಟದಲ್ಲಿ 195 ರನ್ ಗಳಿಸಿದೆ. ರೂಟ್ ಔಟಾಗದೆ 77 ರನ್ ಮತ್ತು ವಿಕೆಟ್ ಕೀಪರ್ ಜೋನಿ ಬೈರ್‌ಸ್ಟೋವ್ ಔಟಾಗದೆ 46 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News