×
Ad

ಸತತ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಝ್ವೆರೆವ್

Update: 2018-08-06 23:19 IST

ವಾಶಿಂಗ್ಟನ್, ಆ.6: ಜರ್ಮನಿ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಸಿಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಇಲ್ಲಿ ರವಿವಾರ ನಡೆದ ಪುರುಷರ ಸಿಂಗಲ್ಸ್ ನ ಫೈನಲ್ ಹಣಾಹಣಿಯಲ್ಲಿ ಝ್ವೆರೆವ್ ಅವರು ಆಸ್ಟ್ರೇಲಿಯದ ಅಲೆಕ್ಸ್ ಮಿನೌರ್‌ರನ್ನು 6-2, 6-4 ನೇರ ಸೆಟ್‌ಗಳಿಂದ ಮಣಿಸಿದ್ದಾರೆ.

 ಝ್ವೆರೆವ್ ಹತ್ತು ವರ್ಷಗಳ ಬಳಿಕ ವಾಶಿಂಗ್ಟನ್ ಟೂರ್ನಿಯಲ್ಲಿ ಸತತ ಪ್ರಶಸ್ತಿ ಜಯಿಸಿದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾದರು. 2008 ಹಾಗೂ 2009ರಲ್ಲಿ ಅರ್ಜೆಂಟೀನದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ಈ ಸಾಧನೆ ಮಾಡಿದ್ದರು.

2018ರಲ್ಲಿ ಮೂರನೇ ಪ್ರಶಸ್ತಿ ಜಯಿಸಿದ 21ರ ಹರೆಯದ ಝ್ವೆರೆವ್ ವೃತ್ತಿಜೀವನದಲ್ಲಿ 9ನೇ ಎಟಿಪಿ ಪ್ರಶಸ್ತಿ ಜಯಿಸಿದ್ದಾರೆ. 19ರ ಹರೆಯದ ಅಲೆಕ್ಸ್ ಮಿನೌರ್ 11 ವರ್ಷಗಳ ಬಳಿಕ ಎಟಿಪಿ ವರ್ಲ್ಡ್‌ಟೂರ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ ಎರಡನೇ ಕಿರಿಯ ಆಟಗಾರನಾಗಿದ್ದರು. 2007ರಲ್ಲಿ ಕ್ಯಾಲಿಫೋರ್ನಿಯದ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ 20ರ ಹರೆಯದ ರಫೆಲ್ ನಡಾಲ್ 19ರ ಹರೆಯದ ನೊವಾಕ್ ಜೊಕೊವಿಕ್‌ರನ್ನು ಮಣಿಸಿದ್ದರು. ಆರಡಿ ಎತ್ತರದ ಝ್ವೆರೆವ್ ಕನಿಷ್ಠ ಮೂರು ಮಾಸ್ಟರ್ಸ್ ಪ್ರಶಸ್ತಿ ಜಯಿಸಿದ ಐದನೇ ಸಕ್ರಿಯ ಆಟಗಾರನಾಗಿದ್ದಾರೆ. ಫೆಡರರ್, ನಡಾಲ್, ಜೊಕೊವಿಕ್ ಹಾಗೂ ಆ್ಯಂಡಿ ಮರ್ರೆ ಈ ಸಾಧನೆ ಮಾಡಿದ್ದಾರೆ. ಐದು ಅಡಿ ಎತ್ತರದ ಮಿನೌರ್ 72ನೇ ರ್ಯಾಂಕಿನಲ್ಲಿದ್ದು, ಅವರು ಇನ್ನಷ್ಟೇ ಟೂರ್ ಮಟ್ಟದ ಪ್ರಶಸ್ತಿ ಜಯಿಸಬೇಕಾಗಿದೆ.

 ಕುಝ್ನೆಸೋವಾಗೆ ಮಹಿಳೆಯರ ಸಿಂಗಲ್ಸ್ ಟ್ರೋಫಿ: ಎರಡು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಸ್ವೆತ್ಲಾನಾ ಕುಝ್ನೆಸೋವಾ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ರವಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಝೆಕ್‌ನ ಡೊನ್ನಾ ವೆಕಿಕ್‌ರನ್ನು 4-6,7-6(7), 6-2 ಸೆಟ್‌ಗಳಿಂದ ಸೋಲಿಸಿದರು.

 2014ರ ಚಾಂಪಿಯನ್ ಕುಝ್ನೆಸೋವಾ ಅಮೆರಿಕದ ರಾಜಧಾನಿಯಲ್ಲಿ ಸತತ 11ನೇ ಪಂದ್ಯವನ್ನು ಜಯಿಸುವ ಮೂಲಕ ವೃತ್ತಿಜೀವನದಲ್ಲಿ 11ನೇ ಪ್ರಶಸ್ತಿ ತನ್ನದಾಗಿಸಿಕೊಂಡರು.

ಕುಝ್ನೆಸೋವಾ 2004ರ ಯು.ಎಸ್. ಓಪನ್ ಹಾಗೂ 2009ರ ಫ್ರೆಂಚ್ ಓಪನ್ ಚಾಂಪಿಯನ್ ಪ್ರಶಸ್ತಿ ಜಯಿಸಿದ್ದಾರೆ. ಹಿಂದೊಮ್ಮೆ ವಿಶ್ವ ರ್ಯಾಂಕಿಂಗ್‌ನಲ್ಲಿ ಎರಡನೇ ರ್ಯಾಂಕಿನಲ್ಲಿದ್ದರು. ಇದೀಗ ಅವರು 128ನೇ ಸ್ಥಾನಕ್ಕೆ ಕುಸಿದಿದ್ದಾರೆ.ಕಳೆದ ವರ್ಷದ ನವೆಂಬರ್‌ನಲ್ಲಿ ಮಣಿಗಂಟು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕುಝ್ನೆಸೋವಾ ಇದೀಗ ಡಬ್ಲುಟಿಎ ಟೂರ್ನಮೆಂಟ್‌ನ್ನು ಜಯಿಸಿದ ಅತ್ಯಂತ ಕೆಳ ರ್ಯಾಂಕಿನ ಆಟಗಾರ್ತಿ ಎನಿಸಿಕೊಂಡಿದ್ದಾರೆ. ರಶ್ಯದ ಆಟಗಾರ್ತಿ 2016ರಲ್ಲಿ ಕ್ರೆಮ್ಲಿನ್‌ನಲ್ಲಿ ಕೊನೆಯ ಬಾರಿ ಡಬ್ಲುಟಿಎ ಪ್ರಶಸ್ತಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News