×
Ad

ವೆಸ್ಟ್‌ಇಂಡೀಸ್ ವಿರುದ್ಧದ ಟ್ವೆಂಟಿ-20 ಸರಣಿ ಗೆದ್ದುಕೊಂಡ ಬಾಂಗ್ಲಾದೇಶ

Update: 2018-08-06 23:29 IST

ಲೌಡೆನ್‌ಹಿಲ್, ಆ.6: ಆ್ಯಂಡ್ರೆ ರಸೆಲ್ ಅಬ್ಬರದ ಬ್ಯಾಟಿಂಗ್ ನಡುವೆಯೂ ಡಿಎಲ್ ನಿಯಮದ ಪ್ರಕಾರ ಮಳೆ ಬಾಧಿತ ಮೂರನೇ ಹಾಗೂ ಅಂತಿಮ ಅಂತರ್‌ರಾಷ್ಟ್ರೀಯ ಟ್ವೆಂಟಿ-20 ಪಂದ್ಯದಲ್ಲಿ ಬಾಂಗ್ಲಾದೇಶ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 19 ರನ್‌ಗಳಿಂದ ಮಣಿಸಿತು. ಈ ಗೆಲುವಿನ ಮೂಲಕ ಟ್ವೆಂಟಿ-20 ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.

ರವಿವಾರ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು.

21 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ 47 ರನ್ ಗಳಿಸಿದ್ದ ರಸೆಲ್ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ಯುವ ವಿಶ್ವಾಸ ಮೂಡಿಸಿದ್ದರು. ಆದರೆ, 17.1ನೇ ಓವರ್‌ನಲ್ಲಿ ರಸೆಲ್ ವಿಕೆಟ್ ಉಡಾಯಿಸಿದ ಎಡಗೈ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ಬಾಂಗ್ಲಾಕ್ಕೆ ರೋಚಕ ಗೆಲುವು ತಂದುಕೊಟ್ಟರು. ರಸೆಲ್ ಔಟಾದ ಬೆನ್ನಿಗೇ ಜೋರಾಗಿ ಮಳೆ ಸುರಿಯಿತು. ಆಗ ವಿಂಡೀಸ್ 17.1 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತ್ತು. ಮಳೆ ನಿಲ್ಲದ ಕಾರಣ ಡಿಎಲ್ ನಿಯಮದಂತೆ ಬಾಂಗ್ಲಾ 19 ರನ್ ಗೆಲುವು ಪಡೆಯಿತು. ಡಿಎಲ್ ನಿಯಮದ ಪ್ರಕಾರ ವಿಂಡೀಸ್ 17.1 ಓವರ್‌ಗಳಲ್ಲಿ 155 ರನ್ ಗಳಿಸಬೇಕಾಗಿತ್ತು. ಟೆಸ್ಟ್ ಸರಣಿಯನ್ನು ಸೋತಿದ್ದ ಬಾಂಗ್ಲಾದೇಶ ಇದೀಗ ಟ್ವೆಂಟಿ-20 ಸರಣಿಯನ್ನು ಗೆದ್ದುಕೊಂಡು ಬೀಗಿದೆ.

ಕಳಪೆ ಫಾರ್ಮ್‌ನಲ್ಲಿದ್ದ ಎವಿನ್ ಲೂಯಿಸ್ ಬದಲಿಗೆ ಚಾಡ್ವಿಕ್ ವಾಲ್ಟನ್‌ರನ್ನು ಆರಂಭಿಕ ಆಟಗಾರನಾಗಿ ಕಣಕ್ಕಿಳಿಸಿದ್ದ ವಿಂಡೀಸ್ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ವಾಲ್ಟನ್ ಹಾಗೂ ಆ್ಯಂಡ್ರೆ ಫ್ಲೆಚರ್ ಅಲ್ಪ ಮೊತ್ತಕ್ಕೆ ಔಟಾದರು. ಹಿರಿಯ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್ ನಿರಾಸೆಗೊಳಿಸಿದರು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ರಾಮ್ದಿನ್ ಆಲ್‌ರೌಂಡರ್ ರೊವ್‌ಮನ್ ಪೊವೆಲ್‌ರೊಂದಿಗೆ 4ನೇ ವಿಕೆಟ್‌ಗೆ 45 ರನ್ ಸೇರಿಸಿ ತಂಡವನ್ನು ಆಧರಿಸಲು ಯತ್ನಿಸಿದರು. ರಾಮ್ದಿನ್ ವಿಕೆಟ್ ಪತನಗೊಂಡ ಬಳಿಕ ಕ್ರೀಸ್‌ಗೆ ಇಳಿದ ರಸೆಲ್ ಅಬ್ಬರದ ಬ್ಯಾಟಿಂಗ್ ಮೂಲಕ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ವಿಶ್ವಾಸ ಮೂಡಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಧೈರ್ಯಗೆಡದ ರಸೆಲ್ ಬಾಂಗ್ಲಾ ಬೌಲರ್‌ಗಳನ್ನು ದಂಡಿಸಿದರು. ಆದರೆ, ಅವರು ಇನಿಂಗ್ಸ್ ಅಂತ್ಯದ ತನಕ ಕ್ರೀಸ್‌ನಲ್ಲಿ ಉಳಿಯದ ಕಾರಣ ವಿಂಡೀಸ್‌ಗೆ ಸೋಲಾಯಿತು.

ಇದಕ್ಕೆ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾದೇಶ ತಂಡಕ್ಕೆ ಲಿಟನ್ ದಾಸ್ ಅರ್ಧಶತಕ(61,32 ಎಸೆತ, 6 ಬೌಂಡರಿ, 3 ಸಿಕ್ಸರ್)ಸಿಡಿಸಿ 184 ರನ್ ಗಳಿಸಲು ನೆರವಾದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ತಮೀಮ್ ಇಕ್ಬಾಲ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ದಾಸ್ 4.4 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 61 ರನ್ ಜೊತೆಯಾಟ ನಡೆಸಿದರು.

ದಾಸ್ ಕೇವಲ 21 ಎಸೆತಗಳಲ್ಲಿ 50 ರನ್ ಪೂರೈಸುವ ಮೂಲಕ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ವೇಗದ ಅರ್ಧಶತಕ ಸಿಡಿಸಿದ ಬಾಂಗ್ಲಾದ ಮೊದಲ ದಾಂಡಿಗ ಎನಿಸಿಕೊಂಡರು.

ತಮೀಮ್(21) ಹಾಗೂ ಸೌಮ್ಯ ಸರ್ಕಾರ್ ವಿಕೆಟ್ ಉರುಳಿಸಿದ ವಿಂಡೀಸ್ ಪಂದ್ಯದಲ್ಲಿ ತಿರುಗೇಟು ನೀಡಿತು. ಆಗ 6ನೇ ವಿಕೆಟ್‌ಗೆ 38 ರನ್ ಜೊತೆಯಾಟ ನಡೆಸಿದ ಮಹ್ಮೂದುಲ್ಲಾ(ಔಟಾಗದೆ 32) ಹಾಗೂ ಆರಿಫುಲ್ ಹಕ್ ಬಾಂಗ್ಲಾ ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ಕಾಣಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News