×
Ad

​ ಕೊಹ್ಲಿ ಪಡೆಗೆ ಇನಿಂಗ್ಸ್ ಸೋಲು

Update: 2018-08-12 22:19 IST

ಲಂಡನ್, ಆ.12: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಕ್ರಿಕೆಟ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಮತ್ತು 159 ರನ್‌ಗಳ ಸೋಲು ಅನುಭವಿಸಿದೆ

ಲಾರ್ಡ್ಸ್ ಟೆಸ್ಟ್‌ನ ನಾಲ್ಕನೇ ದಿನವಾಗಿರುವ ರವಿವಾರ ಭಾರತ ಎರಡನೇ ಇನಿಂಗ್ಸ್ ನಲ್ಲಿ 47 ಓವರ್‌ಗಳಲ್ಲಿ 130 ರನ್‌ಗಳಿಗೆ ಆಲೌಟಾಗುವ ಮೂಲಕ ಇನಿಂಗ್ಸ್ ಸೋಲು ಅನುಭವಿಸಿದೆ

ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ (23ಕ್ಕೆ 4), ಸ್ಟುವರ್ಟ್ ಬ್ರಾಡ್(44ಕ್ಕೆ 4), ಮತ್ತು ಕ್ರಿಸ್ ವೋಕ್ಸ್ (24ಕ್ಕೆ 2) ದಾಳಿಗೆ ಸಿಲುಕಿದ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‌ನ್ನು ಬೇಗನೆ ಮುಗಿಸಿ, ಹೀನಾಯ ಸೋಲು ಅನುಭವಿಸಿದೆ. ಇಂಗ್ಲೆಂಡ್ ಸತತ ಎರಡನೇ ಜಯ ದಾಖಲಿಸಿ 5 ಟೆಸ್ಟ್‌ಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಭಾರತದ ಪರ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(ಔಟಾಗದೆ 33) ಹೋರಾಟ ನಡೆಸಿದರೂ, ಅವರಿಗೆ ಸಾಥ್ ನೀಡುವ ಬ್ಯಾಟ್ಸ್‌ಮನ್‌ಗಳಿಲ್ಲದೆ ಅಜೇಯರಾಗಿ ಉಳಿದರು. ಅವರು ದಾಖಲಿಸಿರುವುದು ತಂಡದ ಪರ ಎರಡನೇ ಇನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.

ಆರಂಭಿಕ ದಾಂಡಿಗರಾದ ಮುರಳಿ ವಿಜಯ್, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಕುಲ್‌ದೀಪ್ ಯಾದವ್ ಮತ್ತು ಮುಹಮ್ಮದ್ ಶಮಿ ಸೊನ್ನೆ ಸುತ್ತಿದರು.

 ಮೊದಲ ಇನಿಂಗ್ಸ್‌ನಲ್ಲಿ 107 ರನ್‌ಗಳಿಗೆ ಆಲೌಟಾಗಿ 289 ರನ್‌ಗಳ ಹಿನ್ನಡೆ ಅನುಭವಿಸಿದ್ದ ಭಾರತ ಎರಡನೇ ಇನಿಂಗ್ಸ್‌ನಲ್ಲೂ ಕಳಪೆ ಪ್ರದರ್ಶನ ಮುಂದುವರಿಸಿತು.

6.1 ಓವರ್‌ಗಳಲ್ಲಿ 13 ರನ್ ಗಳಿಸುವಷ್ಟರಲ್ಲಿ ಆರಂಭಿಕ ದಾಂಡಿಗರಾದ ಮುರಳಿ ವಿಜಯ್ (0) ಮತ್ತು ಲೋಕೇಶ್ ರಾಹುಲ್(10)ರನ್ನು ಆ್ಯಂಡರ್ಸನ್ ಪೆವಿಲಿಯನ್‌ಗೆ ಅಟ್ಟಿದರು. ಬಳಿಕ ಸ್ಟುವರ್ಟ್ ಬ್ರಾಡ್ ಅವರು ಚೇತೇಶ್ವರ ಪೂಜಾರ (17), ಅಜಿಂಕ್ಯ ರಹಾನೆ (13), ವಿರಾಟ್ ಕೊಹ್ಲಿ(17) ಮತ್ತು ದಿನೇಶ್ ಕಾರ್ತಿಕ್(0) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.

30.4 ಓವರ್‌ಗಳಲ್ಲಿ 61ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಪರ ಹೋರಾಟ ನಡೆಸಿದ ಹಾರ್ದಿಕ್ ಪಾಂಡ್ಯ (26)ಮತ್ತು ಆರ್.ಅಶ್ವಿನ್ 7ನೇ ವಿಕೆಟ್‌ಗೆ ಜೊತೆಯಾಟದಲ್ಲಿ 55 ರನ್ ಸೇರಿಸಿದರು. ಇದು ತಂಡದ ಪರ ಎರಡನೇ ಇನಿಂಗ್ಸ್ ನಲ್ಲಿ ದಾಖಲಾದ ಗರಿಷ್ಠ ಮೊತ್ತದ ಜೊತೆಯಾಟ ಆಗಿದೆ. ಪಾಂಡ್ಯರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸುವ ಮೂಲಕ ವೋಕ್ಸ್ ಇವರ ಜೊತೆಯಾಟವನ್ನು ಮುರಿದರು. ಕುಲ್‌ದೀಪ್ ಯಾದವ್ (0) ಮತ್ತು ಮುಹಮ್ಮದ್ ಶಮಿ(0) ಅವರಿಗೆ ಆ್ಯಂಡರ್ಸನ್ ಖಾತೆ ತೆರೆಯಲು ಬಿಡಲಿಲ್ಲ. ಕೊನೆಯಲ್ಲಿ ಇಶಾಂತ್ ಶರ್ಮಾ ಅವರು ವೋಕ್ಸ್ ಎಸೆತದಲ್ಲಿ ಪೋಪ್‌ಗೆ ಕ್ಯಾಚ್ ನೀಡುವುದರೊಂದಿಗೆ ಭಾರತದ ಎರಡನೇ ಇನಿಂಗ್ಸ್ ಮುಕ್ತಾಯಗೊಂಡಿತು. ಇದಕ್ಕೂ ಮೊದಲು ಇಂಗ್ಲೆಂಡ್ ತಂಡ 88.1 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 396 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಕ್ರಿಸ್ ವೋಕ್ಸ್ 137 ರನ್ ಗಳಿಸಿ ಔಟಾಗದೆ ಉಳಿದರು. ಸ್ಯಾಮ್ ಕರನ್ 40 ರನ್ ಗಳಿಸಿ ಔಟಾದರು.

ಭಾರತದ ಮುಹಮ್ಮದ್ ಶಮಿ ಮತ್ತು ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಮತ್ತು ಇಶಾಂತ್ ಶರ್ಮಾ 1 ವಿಕೆಟ್ ಪಡೆದರು. ಮೂರನೇ ದಿನ ಮಂದ ಬೆಳಕಿನಿಂದಾಗಿ ಆಟ ನಿಂತಾಗ ಇಂಗ್ಲೆಂಡ್ 81 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 357 ರನ್ ಗಳಿಸಿತ್ತು. ವೋಕ್ಸ್ 120 ರನ್ ಮತ್ತು ಕರನ್ 22 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News