ಟೆಸ್ಟ್ ಪಂದ್ಯ: ಸ್ವಲ್ಪವೂ ಕೊಡುಗೆ ನೀಡದೇ ದಾಖಲೆ ಪುಸ್ತಕಕ್ಕೆ ಇಂಗ್ಲೆಂಡ್ ಸ್ಪಿನ್ನರ್ ಸೇರ್ಪಡೆ!

Update: 2018-08-13 12:11 GMT

ಲಂಡನ್, ಆ.13: ಆತಿಥೇಯ ಇಂಗ್ಲೆಂಡ್ ತಂಡ ರವಿವಾರ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 159 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಆತಿಥೇಯರು ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಕಾರಣ ಭಾರತ 1974ರ ಬಳಿಕ ಲಾರ್ಡ್ಸ್ ಮೈದಾನದಲ್ಲಿ ಹೀನಾಯ ಸೋಲನುಭವಿಸಿದೆ.

ಇಂಗ್ಲೆಂಡ್‌ನ ಆಡುವ 11ರ ಬಳಗದಲ್ಲಿದ್ದ ಓರ್ವ ಕ್ರಿಕೆಟಿಗ ಎರಡನೇ ಟೆಸ್ಟ್‌ನಲ್ಲಿ ಬೌಲಿಂಗ್,ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಸ್ವಲ್ಪವೂ ಕೊಡುಗೆ ನೀಡದೇ ದಾಖಲೆ ಪುಸ್ತಕಕ್ಕೆ ಅನಾಯಾಸವಾಗಿ ಸೇರ್ಪಡೆಯಾಗಿದ್ದಾರೆ. ಪಂದ್ಯದಲ್ಲಿ ನಾಯಕ ಜೋ ರೂಟ್‌ರಿಂದ ಒಂದೂ ಓವರ್ ಬೌಲಿಂಗ್ ಪಡೆಯದ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಅವರೇ ವಿಲಕ್ಷಣ ದಾಖಲೆ ನಿರ್ಮಿಸಿದ ಆಟಗಾರ.

ರಶೀದ್ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್, ಬ್ಯಾಟಿಂಗ್ ಹಾಗೂ ಒಂದೂ ಕ್ಯಾಚ್ ಅಥವಾ ರನೌಟ್ ಮಾಡದ ವಿಶ್ವದ 14ನೇ ಕ್ರಿಕೆಟಿಗ ಹಾಗೂ 13 ವರ್ಷಗಳ ಬಳಿಕ ಇಂತಹ ವಿಲಕ್ಷಣ ದಾಖಲೆ ನಿರ್ಮಿಸಿರುವ ಇಂಗ್ಲೆಂಡ್‌ನ ಮೊದಲ ಆಟಗಾರನಾಗಿದ್ದಾರೆ.

 ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ 2ನೇ ಇನಿಂಗ್ಸ್‌ನಲ್ಲಿ 23ಕ್ಕೆ 4 ವಿಕೆಟ್ ಪಡೆದರು. ಈ ಮೂಲಕ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನೋರ್ವ ವೇಗಿ ಸ್ಟುವರ್ಟ್ ಬ್ರಾಡ್ 2ನೇ ಇನಿಂಗ್ಸ್‌ನಲ್ಲಿ 44ಕ್ಕೆ 4 ವಿಕೆಟ್‌ಗಳನ್ನು ಪಡೆದು ಭಾರತವನ್ನು 130ಕ್ಕೆ ಆಲೌಟ್ ಮಾಡಿದ್ದರು. ಕ್ರಿಸ್ ವೋಕ್ಸ್ ಮೊದಲ ಇನಿಂಗ್ಸ್‌ನಲ್ಲಿ ಚೊಚ್ಚಲ ಶತಕ(ಔಟಾಗದೆ 137) ಸಿಡಿಸಿದ್ದಲ್ಲದೆ 4 ವಿಕೆಟ್‌ಗಳನ್ನೂ ಕಬಳಿಸಿ ಇಂಗ್ಲೆಂಡ್ ನಾಲ್ಕು ದಿನಗಳೊಳಗೆ ಪಂದ್ಯ ಜಯಿಸಲು ಪ್ರಮುಖ ಪಾತ್ರ ವಹಿಸಿದ್ದರು.

ಹೀಗಾಗಿ  ಹಿರಿಯ ಆಲ್‌ರೌಂಡರ್ ಮೊಯಿನ್ ಅಲಿಯವರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಇಂಗ್ಲೆಂಡ್‌ನ ಆಡುವ 11ರ ಬಳಗಕ್ಕೆ ಸೇರ್ಪಡೆಯಾಗಿ ಚರ್ಚೆ ಗ್ರಾಸವಾಗಿದ್ದ 30ರ ಹರೆಯದ ರಶೀದ್‌ಗೆ ಬೌಲಿಂಗ್, ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಲು ಸಾಧ್ಯವಾಗಿಲ್ಲ. ಭಾರತದ ಆಡಿದ ಎರಡೂ ಇನಿಂಗ್ಸ್‌ಗಳಲ್ಲಿ ಮೋಡ ಕವಿದ ವಾತಾವರಣವು ಸ್ವಿಂಗ್ ಬೌಲಿಂಗ್‌ಗೆ ಸೂಕ್ತವಾಗಿತ್ತು. ವೇಗಿಗಳಾದ ಆ್ಯಂಡರ್ಸನ್ ಹಾಗೂ ಬ್ರಾಡ್ ಭಾರತದ ಬ್ಯಾಟಿಂಗ್‌ಗೆ ಸವಾಲಾದ ಕಾರಣ ಲೆಗ್ ಸ್ಪಿನ್ನರ್ ರಶೀದ್ ಬೌಲಿಂಗ್ ಅವಕಾಶ ಪಡೆಯದೇ ಕೇವಲ ಮೂಕ ಪ್ರೇಕ್ಷಕನಾಗಿ ಉಳಿಯಬೇಕಾಯಿತು.

ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 396 ರನ್ ಗಳಿಸಿದಾಗ ನಾಯಕ ರೂಟ್ ಇನಿಂಗ್ಸ್ ಡಿಕ್ಲೇರ್ ಮಾಡಿದ್ದರು. ಹೀಗಾಗಿ 9ನೇ ಕ್ರಮಾಂಕದ ರಶೀದ್‌ಗೆ ಬ್ಯಾಟಿಂಗ್ ಮಾಡುವ ಅವಕಾಶ ಲಭಿಸಿರಲಿಲ್ಲ. ರಶೀದ್ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುವುದಿಲ್ಲ. ಹಾಗಾಗಿ ಅವರಿಗೆ ಕ್ಯಾಚ್ ಪಡೆಯುವ ಅವಕಾಶವೂ ಹೆಚ್ಚಿರುವುದಿಲ್ಲ.

141 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಪೆರ್ಸಿ ಚಾಪ್‌ಮನ್, ಬ್ರಿಯಾನ್ ವೆಲೆಂಟೈನ್, ಬಿಲ್ ಜಾನ್ಸ್ಸ್‌ಸ್ಟನ್(ಎರಡು ಬಾರಿ), ಎಜಿ ಕೃಪಾಲ್ ಸಿಂಗ್, ನಾರಿ ಕಾಂಟ್ರಾಕ್ಟರ್, ಕ್ರೆಗ್ ಮೆಕ್‌ಡೆರ್ಮೊಟ್, ಆಸಿಫ್ ಮುಜ್ತಾಬಾ, ನೈಲ್ ಮೆಕೆಂಝಿ, ಅಶ್ವೆಲ್ ಪ್ರಿನ್ಸ್, ಗಾರೆತ್ ಬ್ಯಾಟಿ, ಜಾಕ್ ರುಡಾಲ್ಫ್ ಹಾಗೂ ವೃದ್ಧಿಮಾನ್ ಸಹಾ ತಾವಾಡಿದ ಟೆಸ್ಟ್ ಪಂದ್ಯವೊಂದರಲ್ಲಿ ಯಾವುದೇ ಕೊಡುಗೆ ನೀಡದ ಆಟಗಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News