ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ನಂ.1 ಸ್ಥಾನ ಕಳೆದುಕೊಂಡ ವಿರಾಟ್ ಕೊಹ್ಲಿ

Update: 2018-08-13 17:57 GMT

ದುಬೈ, ಆ.13: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕಳೆದುಕೊಂಡಿದ್ದಾರೆ.

ಕೊಹ್ಲಿ ಕೈಯಿಂದ ಜಾರಿದ ನಂ.1 ಪಟ್ಟ ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಪಾಲಾಗಿದೆ. ಸ್ಮಿತ್ ಈ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಪಂದ್ಯದ ವೇಳೆ ನಡೆದಿದ್ದ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧ ಎದುರಿಸುತ್ತಿದ್ದಾರೆ.

ಕೊಹ್ಲಿ 2ನೇ ಟೆಸ್ಟ್ ಪಂದ್ಯದಲ್ಲಿ 23 ಹಾಗೂ 17 ರನ್ ಗಳಿಸಿದ್ದರು. ಭಾರತ ಎರಡೂ ಇನಿಂಗ್ಸ್‌ಗಳಲ್ಲಿ 107 ಹಾಗೂ 130 ರನ್ ಗಳಿಸಿ ಆಂಗ್ಲರ ವಿರುದ್ಧ ಹೀನಾಯವಾಗಿ ಸೋಲುಂಡಿತ್ತು.

ಕನಿಷ್ಠ ಸ್ಕೋರ್ ಗಳಿಕೆ ಹಾಗೂ ಏಕಪಕ್ಷೀಯವಾಗಿ ಪಂದ್ಯವನ್ನು ಕೈಚೆಲ್ಲಿರುವುದು ಭಾರತದ ಆಟಗಾರರ ರ‍್ಯಾಂಕಿಂಗ್‌ ಕುಸಿತಕ್ಕೆ ಕಾರಣವಾಗಿದೆ. ಆಫ್-ಸ್ಪಿನ್ನರ್ ಆರ್. ಅಶ್ವಿನ್ ಇಂಗ್ಲೆಂಡ್ ವಿರುದ್ಧ 29 ಹಾಗೂ ಔಟಾಗದೆ 33 ರನ್ ಗಳಿಸಿದ ಕಾರಣ ಬ್ಯಾಟಿಂಗ್‌ನಲ್ಲಿ 67ರಿಂದ 57ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ರ್ಯಾಂಕಿಂಗ್‌ನಲ್ಲಿ 900ಕ್ಕೂ ಅಧಿಕ ಅಂಕ ಗಳಿಸಿದ ಇಂಗ್ಲೆಂಡ್‌ನ ಏಳನೇ ಆಟಗಾರ ಎನಿಸಿಕೊಂಡರು. 38 ವರ್ಷಗಳ ಬಳಿಕ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 2ನೇ ಟೆಸ್ಟ್‌ನಲ್ಲಿ 43ಕ್ಕೆ 9 ವಿಕೆಟ್ ಪಡೆದಿರುವ ಆ್ಯಂಡರ್ಸನ್ ಒಟ್ಟು 903 ಅಂಕ ಗಳಿಸಿದ್ದಾರೆ. 553 ವಿಕೆಟ್ ಗಳಿಸಿ ಇಂಗ್ಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಂಡಿರುವ ಆ್ಯಂಡರ್ಸನ್ ಲಾರ್ಡ್ಸ್ ಅಂಗಳದಲ್ಲಿ 100 ವಿಕೆಟ್ ಪಡೆದ ಏಕೈಕ ಬೌಲರ್.

ಭಾರತ ವಿರುದ್ಧ 2ನೇ ಟೆಸ್ಟ್‌ನಲ್ಲಿ ಔಟಾಗದೆ 137 ರನ್ ಹಾಗೂ 4 ವಿಕೆಟ್‌ಗಳನ್ನು ಪಡೆದಿರುವ ಕ್ರಿಸ್ ವೋಕ್ಸ್ 34 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 50ನೇ ಸ್ಥಾನಕ್ಕೇರಿದ್ದಾರೆ. ಲಾರ್ಡ್ಸ್‌ನಲ್ಲಿ 93 ರನ್ ಗಳಿಸಿದ್ದ ಜಾನಿ ಬೈರ್‌ಸ್ಟೋವ್ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News