ಸಿನ್ಸಿನಾಟಿ ಟೆನಿಸ್ ಟೂರ್ನಿ: ಜೊಕೊವಿಕ್‌ಗೆ ಜಯ

Update: 2018-08-16 18:06 GMT

ಮಾಸನ್, ಆ.16: ಸಿನ್ಸಿನಾಟಿ ಟೆನಿ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್‌ನಲ್ಲಿ ವಿಂಬಲ್ಡನ್ ಚಾಂಪಿಯನ್ ನೊವಾಕ್ ಜೊಕೊವಿಕ್ ಮೂರನೇ ಸುತ್ತಿಗೆ ತಲುಪಿದ್ದಾರೆ. ಇಲ್ಲಿ ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ನಾಲ್ಕು ಬಾರಿ ವಿಂಬಲ್ಡನ್ ಚಾಂಪಿಯನ್ ಜೊಕೊವಿಕ್ ಅನಾರೋಗ್ಯದ ನಡುವೆಯೂ ಆಡ್ರಿಯನ್ ಮನ್ನಾರಿನೊರನ್ನು 4-6, 6-2, 6-1 ಸೆಟ್‌ಗಳಿಂದ ಸೋಲಿಸಿದ್ದಾರೆ.

ಎರಡನೇ ಸೆಟ್ ಆಡುವಾಗ ಜೊಕೊವಿಕ್‌ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತು. ಟೆನಿಸ್ ಅಂಗಣಕ್ಕೆ ವೈದ್ಯರನ್ನು ಕರೆಸಿಕೊಂಡ ಜೊಕೊವಿಕ್ ಔಷಧಿ ಸೇವಿಸಿ ಪಂದ್ಯವನ್ನು ಮುಂದುವರಿಸಿದರು.

  10ನೇ ಶ್ರೇಯಾಂಕದ ಜೊಕೊವಿಕ್ ಕಳೆದ ತಿಂಗಳು ವಿಂಬಲ್ಡನ್ ಚಾಂಪಿಯನ್‌ಶಿಪ್‌ನ್ನು ಜಯಿಸಿ ಮೊದಲಿನ ಲಯಕ್ಕೆ ಮರಳಿದ್ದರು. ಇದೀಗ ಮುಂಬರುವ ಯುಎಸ್ ಓಪನ್‌ಗೆ ಸಜ್ಜಾಗುತ್ತಿದ್ದಾರೆ. ಜೊಕೊವಿಕ್ ಸಿನ್ಸಿನಾಟಿ ಟೂರ್ನಿಯಲ್ಲಿ 5 ಬಾರಿ ಫೈನಲ್‌ಗೆ ತಲುಪಿದ್ದಾರೆ. ಆದರೆ, ಐದೂ ಬಾರಿಯೂ ಸೋಲನುಭವಿಸಿ ಪ್ರಶಸ್ತಿ ವಂಚಿತರಾಗಿದ್ದರು. ಮೂರು ಬಾರಿ ರೋಜರ್ ಫೆಡರರ್ ಹಾಗೂ 2 ಬಾರಿ ಆ್ಯಂಡಿ ಮರ್ರೆಗೆ ಜೊಕೊವಿಕ್ ಸೋತಿದ್ದರು.

ಹಾಲಿ ಚಾಂಪಿಯನ್ ಗ್ರಿಗೊರ್ ಡಿಮಿಟ್ರೊವ್ ಜರ್ಮನಿಯ ಮಿಸ್ಚಾ ಝ್ವೆರೆವ್‌ರನ್ನು 7-6(5), 7-5 ಅಂತರದಿಂದ ಸೋಲಿಸಿ ಸಿನ್ಸಿನಾಟಿ ಟೂರ್ನಿಯಲ್ಲಿ ತನ್ನ ಗೆಲುವಿನ ಓಟ ಮುಂದುವರಿಸಿದ್ದಾರೆ.

2016ರ ಚಾಂಪಿಯನ್ ಮರಿನ್ ಸಿಲಿಕ್ ರೊಮಾನಿಯದ ಮರಿಯಸ್ ಕೊಪಿಲ್‌ರನ್ನು 6-7(4/7),6-4, 6-4 ಸೆಟ್‌ಗಳಿಂದ ಸೋಲಿಸಿದರು.

3ನೇ ಶ್ರೇಯಾಂಕದ ಜರ್ಮನಿ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಡಚ್‌ನ ಹಿರಿಯ ಆಟಗಾರ ರಾಬಿನ್ ಹಾಸೆ ವಿರುದ್ಧ 7-5, 4-6, 5-7 ಅಂತರದಿಂದ ಸೋತಿದ್ದಾರೆ. ವಿಂಬಲ್ಡನ್ ಫೈನಲಿಸ್ಟ್ ಕೆವಿನ್ ಆ್ಯಂಡರ್ಸನ್ ಅವರು ಜೆರೆಮಿ ಚಾರ್ಡಿ ವಿರುದ್ಧ 7-6(8/6), 6-2 ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ರೊಮಾನಿಯಾದ ಸಿಮೊನಾ ಹಾಲೆಪ್ ಮಳೆಯಿಂದಾಗಿ ಪಂದ್ಯ ರದ್ದುಗೊಳ್ಳುವ ಮೊದಲು 4-6, 6-4, 4-3 ಮುನ್ನಡೆಯಲ್ಲಿದ್ದರು.

  ಕಳೆದ ವಾರ 2ನೇ ಬಾರಿ ರೋಜರ್ಸ್ ಕಪ್ ಪ್ರಶಸ್ತಿ ಜಯಿಸಿದ್ದ ಹಾಲೆಪ್ ಬುಧವಾರ ಪಂದ್ಯದ ವೇಳೆ ಬೆನ್ನುನೋವು ಕಾಣಿಸಿಕೊಂಡಿತ್ತು. ವೈದ್ಯಕೀಯ ಚಿಕಿತ್ಸೆ ಪಡೆದು ಪಂದ್ಯವನ್ನು ಮುಂದುವರಿಸಿದ್ದರು. ಇದೇ ವೇಳೆ, ಹಾಲಿ ಚಾಂಪಿಯನ್ ಗಾರ್ಬೈನ್ ಮುಗುರುಝ ಅವರು ಲೆಸಿಯಾ ಸುರೆಂಕೊ ವಿರುದ್ಧ 2-6, 6-4, 6-4 ಸೆಟ್‌ಗಳಿಂದ ಶರಣಾಗಿ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

7ನೇ ಶ್ರೇಯಾಂಕದ ಮುಗುರುಝ ವಿಂಬಲ್ಡನ್ ಟೂರ್ನಿಯಲ್ಲಿ ಎರಡನೇ ಸುತ್ತಿನಲ್ಲಿ ಮುಗ್ಗರಿಸಿದ್ದರು. ಬಲಗೈ ನೋವಿನ ಹಿನ್ನೆಲೆಯಲ್ಲಿ ಸ್ಯಾನ್‌ಜೋಸ್ ಹಾಗೂ ರೋಜರ್ಸ್ ಕಪ್ ಟೂರ್ನಿಯಿಂದ ಹಿಂದೆ ಸರಿದಿದ್ದರು.

ಯುಎಸ್ ಓಪನ್ ಚಾಂಪಿಯನ್ ಸ್ಲೋಯಾನ್ ಸ್ಟೀಫನ್ಸ್ ಜರ್ಮನಿಯ ಕ್ವಾಲಿಫೈಯರ್ ಟಟ್ಜಾನಾ ಮರಿಯಾರನ್ನು 6-3, 6-2 ನೇರ ಸೆಟ್‌ಗಳಿಂದ ಮಣಿಸುವ ಮೂಲಕ ಮೂರನೇ ಸುತ್ತು ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News