ಏಶ್ಯನ್ ಗೇಮ್ಸ್‌ಗೆ ವರ್ಣರಂಜಿತ ಚಾಲನೆ: ಪಥಸಂಚಲನದಲ್ಲಿ ಏಕತೆ ಪ್ರದರ್ಶಿಸಿದ ಉಭಯ ಕೊರಿಯಾಗಳು

Update: 2018-08-18 16:34 GMT

ಜಕಾರ್ತ, ಅ.18: ವಿಶ್ವದ ದೊಡ್ಡ ಕ್ರೀಡಾಕೂಟ ಏಶ್ಯನ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಒಟ್ಟಿಗೆ ಪಥಸಂಚಲನದಲ್ಲಿ ಭಾಗಿಯಾದ ಉತ್ತರ ಹಾಗೂ ದಕ್ಷಿಣ ಕೊರಿಯಾ ದೇಶಗಳು ಏಕತೆಯನ್ನು ಪ್ರದರ್ಶಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದವು.

 ದಕ್ಷಿಣಕೊರಿಯಾದ ಮಹಿಳಾ ಬಾಸ್ಕೆಟ್‌ಬಾಲ್ ಆಟಗಾರ್ತಿ ಲಿಮ್ ಯಂಗ್-ಹ್ಯೂ ಹಾಗೂ ಉತ್ತರ ಕೊರಿಯಾದ ಫುಟ್ಬಾಲ್ ಆಟಗಾರ ಜು ಕಿಯೊಂಗ್-ಚೊಲ್ ಕೊರಿಯಾದ ಏಕೀಕೃತ ಧ್ವಜವನ್ನು ಹಿಡಿದು ಪಥ ಸಂಚಲನದಲ್ಲಿ ಭಾಗವಹಿಸಿದಾಗ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರು ಎದ್ದುನಿಂತು ಸ್ವಾಗತಿಸಿದರು.

ಉಭಯ ಕೊರಿಯಾಗಳು ಈ ವರ್ಷ ಪಥಸಂಚಲನದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದು ಇದು ಎರಡನೇ ಬಾರಿ. ಪಿಯಾಂಗ್‌ಚಾಂಗ್ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಪಥಸಂಚಲನದಲ್ಲಿ ಏಕತೆ ಪ್ರದರ್ಶಿಸಿದ್ದರು.

ಇಂಡೋನೇಶ್ಯಾದ ಅಧ್ಯಕ್ಷ ಜೊಕೊ ವಿಡೊಡೊ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದ್ದ ಜಿಬಿಕೆ ಸ್ಟೇಡಿಯಂಗೆ ಮೋಟಾರ್ ಬೈಕ್ ರೈಡ್ ಮೂಲಕ ಪ್ರವೇಶಿಸಿ ಅಚ್ಚರಿ ಮೂಡಿಸಿದರು. 1500 ನೃತ್ಯಗಾರರು ಸಾಂಪ್ರದಾಯಿಕ ಉಡುಪು ಧರಿಸಿ ನೃತ್ಯ ಪ್ರದರ್ಶಿಸಿದರು.

ಗೇಮ್ಸ್‌ನಲ್ಲಿ ಭಾಗವಹಿಸಿದ ದೇಶಗಳ ಅಥ್ಲೀಟ್‌ಗಳ ಪಥಸಂಚಲನ ಕಾರ್ಯಕ್ರಮದಲ್ಲಿ ಅಫ್ಘಾನಿಸ್ತಾನ ಮೊದಲ ತಂಡವಾಗಿ,ಆತಿಥೇಯ ಇಂಡೊನೇಶ್ಯಾ ಕೊನೆಯ ತಂಡವಾಗಿ ಸ್ಟೇಡಿಯಂ ಪ್ರವೇಶಿಸಿತು. ಉಭಯ ಕೊರಿಯಾಗಳ ಸುಮಾರು 1000 ಅಥ್ಲೀಟ್‌ಗಳು ಬಿಳಿ ಹಾಗೂ ನೀಲಿ ಬಣ್ಣದ ಸಮವಸ್ತ್ರ ಧರಿಸಿ ಒಟ್ಟಿಗೆ ಪಥಸಂಚಲನ ನಡೆಸಿದಾಗ ನೆರೆದಿದ್ದ ಪ್ರೇಕ್ಷಕರಿಂದ ಕರತಾಡನವಾಯಿತು.

ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ ಗೇಮ್ಸ್‌ನ ಧ್ವಜಧಾರಿಯಾಗಿ 572 ಸದಸ್ಯರ ಭಾರತದ ಅಥ್ಲೀಟ್ ತಂಡಗಳ ತಂಡವನ್ನು ಮುನ್ನಡೆಸಿದರು. ಇಂಡೋನೇಶ್ಯಾದ 1992ರ ಬಾರ್ಸಿಲೋನಾ ಒಲಿಂಪಿಕ್ಸ್ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ ಸುಸಿ ಸುಸಾಂತಿ ಏಶ್ಯನ್ ಗೇಮ್ಸ್ ಕ್ರೀಡಾ ಜ್ಯೋತಿಯನ್ನು ಬೆಳಗಿದರು. ಆಗ ಸ್ಟೇಡಿಯಂನಲ್ಲಿ ಸುಡುಮದ್ದು ಸಿಡಿಯಲ್ಪಟ್ಟಿತು.

ಇಂಡೋನೇಶ್ಯಾದ ಗಾಯಕ ವಿಯಾ ವಾಲ್ಲೆನ್ ಹಾಡುತ್ತಿದ್ದಾಗ ಅಧ್ಯಕ್ಷ ವಿಡೊಡೊ ತಾನು ಕುಳಿತ್ತಿದ್ದ ಆಸನದಲ್ಲಿ ಡ್ಯಾನ್ಸ್ ಮಾಡುತ್ತಿರುವುದು ಕಂಡುಬಂತು. ಇತ್ತೀಚೆಗೆ ಇಂಡೋನೇಶ್ಯಾದಲ್ಲಿ ಸಂಭವಿಸಿದ ಲಾಂಬೊಕ್ ಭೂಕಂಪದ ಸಂತ್ರಸ್ತರಿಗೆ ಗೌರವಾರ್ಥ ವೌನ ಪ್ರಾರ್ಥನೆ ನಡೆದಾಗ ಸ್ಟೇಡಿಯಂ ಸ್ತಬ್ದವಾಯಿತು.

ಜಕಾರ್ತ ಹಾಗೂ ಪಾಲೆಂಬಾಂಗ್‌ನಲ್ಲಿ 18ನೇ ಆವೃತ್ತಿಯ ಏಶ್ಯನ್ ಗೇಮ್ಸ್ ಆರಂಭವಾಯಿತು ಎಂದು ಇಂಡೋನೇಶ್ಯಾದ ಅಧ್ಯಕ್ಷ ವಿಡೊಡೊ ಘೋಷಣೆ ಮಾಡಿದರು. ಏಶ್ಯಾ ಗೇಮ್ಸ್‌ನಲ್ಲಿ 45 ಏಶ್ಯಾ ದೇಶಗಳ 18,000 ಅಥ್ಲೀಟ್‌ಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News