ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾ ವೇಗಿ ಮಿಚೆಲ್ ಜಾನ್ಸನ್

Update: 2018-08-19 14:44 GMT

ಸಿಡ್ನಿ, ಆ.19: ದೈಹಿಕ ಕ್ಷಮತೆ ಕುಂದುತ್ತಿರುವ ಹಿನ್ನೆಲೆಯಲ್ಲಿ ತಾನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತನಾಗುವುದಾಗಿ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಜಾನ್ಸನ್ ರವಿವಾರ ಘೋಷಿಸಿದ್ದಾರೆ. ಮೂರು ವರ್ಷದ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದ ಜಾನ್ಸನ್ ಭಾರತದ ಐಪಿಎಲ್ ಹಾಗೂ ಇತರ ಸ್ಥಳೀಯ ಟಿ-20 ಲೀಗ್‌ನಲ್ಲಿ ಆಟ ಮುಂದುವರಿಸಿದ್ದರು. ಕಳೆದ ತಿಂಗಳು ಬಿಗ್‌ಬ್ಯಾಷ್ ಲೀಗ್‌ನಲ್ಲಿ ತಾನು ಪ್ರತಿನಿಧಿಸುತ್ತಿದ್ದ ಪರ್ತ್ ಸ್ಕಾರ್ಚರ್ಸ್ ತಂಡದಿಂದ ಹೊರಗುಳಿದಿದ್ದರು.

ಮುಂದಿನ ವರ್ಷದ ಮಧ್ಯಭಾಗದವರೆಗೆ ವಿಶ್ವದ ಹಲವೆಡೆ ಟಿ-20 ಟೂರ್ನಿಯಲ್ಲಿ ಆಟ ಮುಂದುವರಿಸುವ ನಿರೀಕ್ಷೆಯಲ್ಲಿದ್ದೆ. ಆದರೆ ನನ್ನ ದೇಹ ಇದಕ್ಕೆ ಒಪ್ಪುತ್ತಿಲ್ಲ. ಈಗ ನನ್ನ ಅಂತಿಮ ಎಸೆತ ಬೌಲ್ ಮಾಡಿದ್ದೇನೆ. ಇದೀಗ ಓವರ್ ಮುಗಿದಿದೆ. ನನ್ನ ಅಂತಿಮ ವಿಕೆಟ್ ಪಡೆದಿದ್ದೇನೆ. ಈ ದಿನ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು 36ರ ಹರೆಯದ ಎಡಗೈ ವೇಗಿ ‘ಪರ್ತ್ ನವ್’ ನ್ಯೂಸ್ ವೆಬ್‌ಸೈಟ್‌ನಲ್ಲಿ ಘೋಷಿಸಿದ್ದಾರೆ. ಕಳೆದ ವರ್ಷ ಐಪಿಎಲ್‌ನಲ್ಲಿ ಆಡುತ್ತಿದ್ದಾಗ ಬೆನ್ನು ನೋವು ಆರಂಭವಾಗಿದೆ. ಬಹುಷಃ ನಿವೃತ್ತಿ ಘೋಷಿಸುವ ಸಂಕೇತ ಇದಾಗಿರಬಹುದು ಎಂದು ಆಗಲೇ ನನಗನಿಸಿತ್ತು. ನೀವು ಆಟದಲ್ಲಿ ಶೇ.100ರಷ್ಟು ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಅಸಾಧ್ಯ ಎಂದಾದರೆ ಆಗ ತಂಡಕ್ಕೆ ನಿಮ್ಮಿಂದ ಉತ್ತಮ ಕೊಡುಗೆ ನೀಡಲು ಸಾಧ್ಯವಾಗದು. ಈ ಕಾರಣದಿಂದ ಜೀವನದಲ್ಲಿ ಮತ್ತೊಂದು ಅವಧಿಯನ್ನು ಆರಂಭಿಸಲು ನಿರ್ಧರಿಸಿದ್ದೇನೆ. ಭವಿಷ್ಯದಲ್ಲಿ ಸವಾಲಿನ ಕಾರ್ಯಗಳಾದ ಕೋಚ್ ಅಥವಾ ಮೆಂಟರ್ ಆಗಿ ಮುಂದುವರಿಯಲು ಬಯಸಿರುವುದಾಗಿ ಜಾನ್ಸನ್ ತಿಳಿಸಿದ್ದಾರೆ.

►► ಸಾಧನೆ

► ಭಯಾನಕ ಎಡಗೈ ವೇಗಿಯಾಗಿದ್ದ ಜಾನ್ಸನ್ 2007ರಲ್ಲಿ ಆಸ್ಟ್ರೇಲಿಯಾದ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದು 2008ರಲ್ಲಿ ದಕ್ಷಿಣ ಆಫ್ರಿಕಾದ ಎದುರು 61ಕ್ಕೆ 8 ವಿಕೆಟ್ ಉರುಳಿಸಿದ್ದು ಟೆಸ್ಟ್‌ನಲ್ಲಿ ಅವರ ಅತ್ಯುತ್ತಮ ಸಾಧನೆಯಾಗಿದೆ.

► 73 ಟೆಸ್ಟ್ ಪಂದ್ಯಗಳಲ್ಲಿ 313 ವಿಕೆಟ್ ಉರುಳಿಸಿದ್ದ ಜಾನ್ಸನ್ 2015ರ ನವೆಂಬರ್‌ನಲ್ಲಿ ಪರ್ತ್‌ನಲ್ಲಿ ನ್ಯೂಝಿಲ್ಯಾಂಡ್ ಎದುರಿಗಿನ ಟೆಸ್ಟ್ ಪಂದ್ಯದ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

153 ಏಕದಿನ ಪಂದ್ಯಗಳಲ್ಲಿ 239 ವಿಕೆಟ್

► 30 ಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 38 ವಿಕೆಟ್ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News