ಭವ್ಯ ಬಂಗಲೆ ಬದಲು ಸಣ್ಣ ಮನೆಯಲ್ಲಿ ವಾಸಿಸಲಿದ್ದಾರೆ ಇಮ್ರಾನ್ ಖಾನ್

Update: 2018-08-20 16:35 GMT

ಇಸ್ಲಾಮಾಬಾದ್, ಆ. 20: ಭ್ರಷ್ಟಾಚಾರವನ್ನು ನಿಗ್ರಹಿಸುವ ಹಾಗೂ ಮಿತವ್ಯಯ ನೀತಿಯನ್ನು ಜಾರಿಗೊಳಿಸುವ ಮೂಲಕ ಪಾಕಿಸ್ತಾನವನ್ನು ಅದರ ಗತ ವೈಭವದೆಡೆಗೆ ಮತ್ತೆ ಮುನ್ನಡೆಸುವುದಾಗಿ ದೇಶದ ನೂತನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ಬಳಿಕ, ರವಿವಾರ ರಾತ್ರಿ ದೇಶವನ್ನುದ್ದೇಶಿಸಿ ಪ್ರಥಮ ಭಾಷಣ ಮಾಡಿದ ಅವರು, ಪ್ರಧಾನಿಯ ಅಧಿಕೃತ ನಿವಾಸದಲ್ಲಿ ವಾಸಿಸದೆ ಮಿತವ್ಯಯ ನೀತಿಯನ್ನು ಸ್ವತಃ ಪಾಲಿಸುವುದಾಗಿ ಹೇಳಿದರು.

‘‘ಬದಲಿಗೆ, ನಾನು ಸೇನಾ ಕಾರ್ಯದರ್ಶಿಗೆ ಸಾಂಪ್ರದಾಯಿಕವಾಗಿ ನೀಡುವ, ಕೇವಲ ಇಬ್ಬರು ಸಿಬ್ಬಂದಿಯಿರುವ ಮನೆಯೊಂದರಲ್ಲಿ ವಾಸಿಸುತ್ತೇನೆ. ನನಗೆ ಅದೂ ಬೇಕಾಗಿರಲಿಲ್ಲ. ಆದರೆ, ಭದ್ರತಾ ಕಾರಣಗಳಿಗಾಗಿ ಅಲ್ಲಿ ವಾಸಿಸುವಂತೆ ನನಗೆ ತಿಳಿಸಲಾಗಿದೆ’’ ಎಂದು ಪಾಕಿಸ್ತಾನದ ಏಕೈಕ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ನಾಯಕ ಹೇಳಿದರು.

 ಆದಾಗ್ಯೂ, ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವುದಕ್ಕಾಗಿ ಹಾಗೂ ಜನರ ಜೀವನ ಮಟ್ಟವನ್ನು ಉತ್ತಮಪಡಿಸುವುದಕ್ಕಾಗಿ ಹೆಚ್ಚಿನ ತೆರಿಗೆ ವಿಧಿಸಬೇಕಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News