ಏಶಿಯನ್ ಗೇಮ್ಸ್: ಶಾಟ್ ಪುಟ್ ನಲ್ಲಿ ಚಿನ್ನ ಗೆದ್ದ ಭಾರತದ ತಾಜೀಂದರ್ ಪಾಲ್ ಸಿಂಗ್

Update: 2018-08-25 18:19 GMT

ಜಕಾರ್ತ, ಆ.25: ಇಂಡೋನೇಶ್ಯಾದ ಅವಳಿ ನಗರಗಳಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್‌ನ ಏಳನೇ ದಿನವಾಗಿರುವ ಶನಿವಾರ ಭಾರತಕ್ಕೆ ಪುರುಷರ ಶಾಟ್‌ಪುಟ್‌ನಲ್ಲಿ ಚಿನ್ನ ದೊರಕಿದ್ದು, ಸ್ಕ್ವಾಷ್‌ನಲ್ಲಿ ಹ್ಯಾಟ್ರಿಕ್ ಕಂಚು ಸಿಕ್ಕಿದೆ.

 ಜಕಾರ್ತದಲ್ಲಿ ನಡೆದ ಸ್ಪರ್ಧೆಯಲ್ಲಿ ತೇಜಿಂದರ್‌ಪಾಲ್ ಸಿಂಗ್ ಪುರುಷರ ಶಾಟ್‌ಪುಟ್‌ನಲ್ಲಿ 20.75 ಮೀಟರ್ ದೂರಕ್ಕೆ ಗುಂಡು ಎಸೆದು ಕೂಟದಲ್ಲಿ ನೂತನ ದಾಖಲೆಯೊಂದಿಗೆ ಚಿನ್ನ ಪಡೆದರು.

 ತೇಜಿಂದರ್‌ಪಾಲ್ ಸಿಂಗ್ ಐದನೇ ಪ್ರಯತ್ನದಲ್ಲಿ ಚಿನ್ನ ಬಾಚಿಕೊಂಡರು. ಇದು ಟ್ರಾಕ್ ಆ್ಯಂಡ್ ಫೀಲ್ಡ್ ಸ್ಪರ್ಧೆಯಲ್ಲಿ 2018ರ ಏಶ್ಯನ್ ಗೇಮ್ಸ್‌ನಲ್ಲಿ ಭಾರತ ಪಡೆದ ಮೊದಲ ಚಿನ್ನವಾಗಿದೆ.

  ತೇಜಿಂದರ್‌ಪಾಲ್ ಸಿಂಗ್ ಸ್ಪರ್ಧೆಯ ಆರಂಭದಲ್ಲೇ ಪದಕದ ನಿರೀಕ್ಷೆ ಮೂಡಿಸಿದ್ದರು. ಮೊದಲ ಯತ್ನದಲ್ಲಿ 19.96 ಮೀಟರ್ ದೂರಕ್ಕೆ ಗುಂಡನ್ನು ಎಸೆದರು. ಇದು ಅವರಿಗೆ ಮುನ್ನಡೆಗೆ ನೆರವಾಯಿತು.

ತೇಜಿಂದರ್ 2ನೇ ಪ್ರಯತ್ನದಲ್ಲಿ 19.15 ಮೀಟರ್, ಮೂರನೇ ಪ್ರಯತ್ನದಲ್ಲಿ 19.96 ಮೀಟರ್, ನಾಲ್ಕನೇ ಪ್ರಯತ್ನದಲ್ಲೂ 19.96 ಮೀಟರ್ ದೂರಕ್ಕೆ ಶಾಟ್‌ಪುಟ್ ಎಸೆದರು. ಐದನೇ ಪ್ರಯತ್ನದಲ್ಲಿ 20.75 ಮೀ ಸಾಧನೆಯೊಂದಿಗೆ ಚಿನ್ನ ತನ್ನದಾಗಿಸಿಕೊಂಡರು.

ತೇಜಿಂದರ್‌ಪಾಲ್ ಸಿಂಗ್ ಈ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಓಂ ಪ್ರಕಾಶ್ ಕರ್ಹಾನ 20.69 ಮೀ. ಸಾಧನೆಯೊಂದಿಗೆ 6 ವರ್ಷಗಳ ಹಿಂದೆ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಪಂಜಾಬ್‌ನ 24ರ ಹರೆಯದ ತೇಜಿಂದರ್‌ಪಾಲ್ ಸಿಂಗ್ ಅವರ ಹಿಂದಿನ ಸಾಧನೆ 20.24 ಮೀ. ಆಗಿತ್ತು. ಈ ಕಾರಣದಿಂದಾಗಿ ಏಶ್ಯನ್ ಅಥ್ಲೀಟ್‌ಗಳ ಪೈಕಿ ಅವರು ಪದಕ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದರು.

 ಕೂಟದಲ್ಲಿ ತೇಜಿಂದರ್‌ಪಾಲ್ ಸಿಂಗ್ ಮೊದಲ ಸ್ಥಾನದೊಂದಿಗೆ ಚಿನ್ನ ಪಡೆದರೆ, ಚೀನಾದ ಲಿಯು ಯಾಂಗ್ (19.52 ಮೀ.) ಎರಡನೇ ಸ್ಥಾನದೊಂದಿಗೆ ಬೆಳ್ಳಿ ಮತ್ತು ಕಝಕಿಸ್ತಾನದ ಐವಾನ್ ಐವಾನೊವ್ (19.40 ಮೀ.) ಕಂಚು ತಮ್ಮದಾಗಿಸಿಕೊಂಡರು.

  2010ರಲ್ಲಿ ಗುವಾಂಗ್‌ರೊ ಏಶ್ಯನ್ ಗೇಮ್ಸ್‌ನಲ್ಲಿ ಸೌದಿ ಅರೇಬಿಯಾದ ಸುಲ್ತಾನ್ ಅಬ್ದುಲ್‌ಮಜೀದ್ ಇ ಅಲಾಬಾಶಿ 20.57 ಮೀ. ಸಾಧನೆಯೊಂದಿಗೆ ದಾಖಲೆ ನಿರ್ಮಿಸಿದ್ದರು. ಇದು ಏಶ್ಯನ್ ಗೇಮ್ಸ್ ನಲ್ಲಿ ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು. ಈ ದಾಖಲೆಯನ್ನು ತೇಜಿಂದರ್‌ಪಾಲ್ ಮುರಿದಿದ್ದಾರೆ. ಏಶ್ಯನ್ ಗೇಮ್ಸ್‌ನ ಇತಿಹಾಸದಲ್ಲೇ ನೂತನ ದಾಖಲೆಯನ್ನು ತನ್ನ ಹೆಸರಲ್ಲಿ ಬರೆದರು.

ಪಂಜಾಬ್‌ನ ರೈತನ ಮಗ ತೇಜಿಂದರ್‌ಪಾಲ್ ಸಿಂಗ್

ಪಂಜಾಬ್‌ನ ರೈತ ಕುಟುಂಬದಿಂದ ಬಂದಿರುವ ತೇಜಿಂದರ್ ಪಾಲ್ ಸಿಂಗ್ ಏಶ್ಯನ್ ಗೇಮ್ಸ್‌ನ ಪುರುಷರ ಶಾಟ್‌ಪುಟ್‌ನಲ್ಲಿ ಚಿನ್ನದ ಪದಕ ಜಯಿಸಿ ಗಮನ ಸೆಳೆದಿದ್ದಾರೆ.

ತೇಜಿಂದರ್ 1994ರಲ್ಲಿ ಪಂಜಾಬ್‌ನ ಮೊಗಾದಲ್ಲಿರುವ ರೈತ ಕುಟುಂಬದಲ್ಲಿ ಜನಿಸಿದರು. ಬಾಲ್ಯದಲ್ಲೇ ಕ್ರಿಕೆಟಿಗನಾಗಬೇಕೆಂಬ ಬಯಕೆಯಿತ್ತು. ಆದರೆ, ತಂದೆಯ ಪ್ರೋತ್ಸಾಹದಿಂದ ಶಾಟ್‌ಪುಟ್‌ನ್ನು ಆಯ್ಕೆ ಮಾಡಿಕೊಂಡರು. ಫೆಡರೇಶನ್ ಕಪ್, ಅಂತರ್‌ರಾಜ್ಯ ಸ್ಪರ್ಧೆಗಳು ಹಾಗೂ ಓಪನ್ ನ್ಯಾಶನಲ್ಸ್‌ಗಳಲ್ಲಿ ಪದಕ ಜಯಿಸಿ ಖ್ಯಾತಿ ಪಡೆದರು. 2015ರಲ್ಲಿ ಸಿಂಗ್ ಭಾರತೀಯ ನೌಕಾಪಡೆಗೆ ಸೇರ್ಪಡೆಯಾದರು.

 2017ರಲ್ಲಿ ಭುವನೇಶ್ವರದಲ್ಲಿ ನಡೆದ ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸಿಂಗ್ ಬೆಳ್ಳಿ ಪದಕ ಜಯಿಸಿದ್ದರು. ಕಳೆದ ವರ್ಷ ತುರ್ಕ್‌ಮೆನಿಸ್ತಾನದಲ್ಲಿ ನಡೆದ ಏಶ್ಯನ್ ಒಳಾಂಗಣ ಚಾಂಪಿಯನ್‌ಶಿಪ್‌ನಲ್ಲಿ ಮತ್ತೊಮ್ಮೆ ಬೆಳ್ಳಿ ಗೆದ್ದಿದ್ದರು.

2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸಿಂಗ್ ನಿರಾಶಾದಾಯಕ ಪ್ರದರ್ಶನ ನೀಡಿ 8ನೇ ಸ್ಥಾನ ಪಡೆದಿದ್ದರು. ಈ ವರ್ಷ ನಡೆದ 57ನೇ ಆವೃತ್ತಿಯ ರಾಷ್ಟ್ರೀಯ ಅಂತರ್-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ ಸಿಂಗ್ ಮೊದಲಿನ ಲಯಕ್ಕೆ ಮರಳಿದ್ದರು. ಪ್ರಸ್ತುತ ಅವರು ಏಶ್ಯಾದ ನಂ.1 ಶಾಟ್‌ಪುಟ್ ಪಟು ಆಗಿದ್ದಾರೆ.

ತೇಜಿಂದರ್ ಮೇಲೆ ಭಾರೀ ನಿರೀಕ್ಷೆ ಇಡಲಾಗಿತ್ತು. ಜಕಾರ್ತದಲ್ಲಿ ಚಿನ್ನ ಜಯಿಸಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News