ಏಶಿಯನ್ ಗೇಮ್ಸ್: 3ನೆ ಸ್ಥಾನಿಯಾಗಿ ಗುರಿ ತಲುಪಿದ್ದರೂ ಗೋವಿಂದನ್ ಗೆ ಸಿಗಲಿಲ್ಲ ಕಂಚು!
ಹೊಸದಿಲ್ಲಿ, ಆ.26: ಏಶಿಯನ್ ಗೇಮ್ಸ್ ನಲ್ಲಿ 10 ಸಾವಿರ ಮೀಟರ್ ಓಟದಲ್ಲಿ ಎರಡು ದಶಕಗಳ ನಂತರ ಲಭಿಸಲಿದ್ದ ಪದಕವೊಂದು ಕೊನೆಯ ಕ್ಷಣದಲ್ಲಿ ಕೈತಪ್ಪಿದೆ. ಜಕಾರ್ತದಲ್ಲಿ ನಡೆಯುತ್ತಿರುವ ಏಶಿಯನ್ ಗೇಮ್ಸ್ ನ 10,000 ಮೀ. ಓಟದಲ್ಲಿ ಭಾರತದ ಗೋವಿಂದನ್ ಲಕ್ಷ್ಮಣನ್ 3ನೆ ಸ್ಥಾನಿಯಾಗಿ ಹೊರಹೊಮ್ಮಿದ್ದರು. ಈ ಮೂಲಕ ಭಾರತದ ಖಾತೆಗೆ ಮತ್ತೊಂದು ಕಂಚು ಸೇರ್ಪಡೆಯಾಯಿತು ಎನ್ನುವಷ್ಟರಲ್ಲೇ ತೀರ್ಪುಗಾರರು ಗೋವಿಂದನ್ ರ ಪ್ರದರ್ಶನವನ್ನು ಅನರ್ಹಗೊಳಿಸಿದ್ದಾರೆ.
ಭಾರತದ ಸೇನೆಯ ಓಟಗಾರನಾಗಿರುವ ಗೋವಿಂದನ್ 3ನೆಯವರಾಗಿ ಗುರಿ ಮುಟ್ಟಿದ್ದರು. ಆದರೆ ಓಟದ ನಡುವೆ ಅವರು ಕಾಲು ಟ್ರ್ಯಾಕ್ ನಿಂದ ಹೊರಗಿತ್ತು ಎನ್ನುವ ಕಾರಣ ನೀಡಿದ ತೀರ್ಪುಗಾರರು ಗೋವಿಂದನ್ ರನ್ನು ಅನರ್ಹಗೊಳಿಸಿದ್ದಾರೆ. ಒಂದು ವೇಳೆ ಗೋವಿಂದನ್ ಕಂಚು ಗೆದ್ದಿದ್ದರೆ ಏಶಿಯನ್ ಗೇಮ್ಸ್ ನ 10 ಸಾವಿರ ಮೀ. ಓಟದಲ್ಲಿ 20 ವರ್ಷಗಳ ನಂತರ ಭಾರತ ಗೆದ್ದ ಪದಕ ಇದಾಗಿರುತ್ತಿತ್ತು.
29 ನಿಮಿಷ 44.91 ಸೆಕೆಂಡುಗಳಲ್ಲಿ ಗೋವಿಂದನ್ ಗುರಿ ಮುಟ್ಟಿದ್ದರು. ಪ್ರಥಮ ಸ್ಥಾನಿಯಾದ ಬಹರೈನ್ ನ ಹಸನ್ ಚಾನಿ 28:35.45 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ತೀರ್ಪುಗಾರರ ಈ ನಿರ್ಧಾರವನ್ನು ವಿರೋಧಿಸಿ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಪ್ರತಿಭಟನೆ ಸಲ್ಲಿಸಿದೆ.