ಅಳುತ್ತಿದ್ದ ಪೈಲಟ್‌ನ ಮಾನಸಿಕ ಅಸ್ಥಿರತೆ ಕಾರಣ: ತನಿಖಾ ಸಮಿತಿ ವರದಿ

Update: 2018-08-27 17:44 GMT

ಕಠ್ಮಂಡು, ಆ. 27: ಕಠ್ಮಂಡುವಿನಲ್ಲಿರುವ ನೇಪಾಳದ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ನಡೆದ ವಿಮಾನ ಅಪಘಾತಕ್ಕೆ ಪೈಲಟ್ ಕಾರಣ ಎಂದು ಸೋಮವಾರ ಸೋರಿಕೆಯಾದ ತನಿಖಾ ವರದಿ ಹೇಳಿದೆ.

 ತನ್ನ ವಿಮಾನ ಚಾಲನಾ ನೈಪುಣ್ಯತೆ ಬಗ್ಗೆ ಸಹೋದ್ಯೋಗಿಯಿಂದ ಸಂಶಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪೈಲಟ್ ವಿಮಾನ ಯಾನದ ವೇಳೆ ಅತ್ತಿದ್ದರು ಹಾಗೂ ಭಾವಾವೇಶಕ್ಕೆ ಒಳಗಾಗಿದ್ದರು ಎನ್ನುವುದು ತನಿಖೆಯಲ್ಲಿ ಹೊರಬಿದ್ದಿದೆ.

ಮಾರ್ಚ್ 12ರಂದು ಬಾಂಗ್ಲಾದೇಶ ರಾಜಧಾನಿ ಢಾಕಾದಿಂದ ಹೊರಟ ವಿಮಾನವು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪ್ಪಳಿಸಿತ್ತು. ಬಳಿಕ ಅದು ಸಮೀಪದ ಫುಟ್ಬಾಲ್ ಮೈದಾನಕ್ಕೆ ಜಾರಿತ್ತು ಹಾಗೂ ಹೊತ್ತಿ ಉರಿದಿತ್ತು. ದುರಂತದಲ್ಲಿ 51 ಮಂದಿ ಪ್ರಾಣ ಕಳೆದುಕೊಂಡಿದ್ದರು. ಅದು ದಶಕಗಳ ಅವಧಿಯಲ್ಲಿ ನೇಪಾಳದ ಅತ್ಯಂತ ಭೀಕರ ವಿಮಾನ ಅಪಘಾತವಾಗಿತ್ತು.

ಉತ್ತಮ ಪೈಲಟ್ ಎಂಬ ತನ್ನ ಹೆಗ್ಗಳಿಕೆಯನ್ನು ಮಹಿಳಾ ಸಹೋದ್ಯೋಗಿಯೋರ್ವರು ಪ್ರಶ್ನಿಸಿದ ಹಿನ್ನೆಲೆಯಲ್ಲಿ, ಯುಎಸ್-ಬಾಂಗ್ಲಾ ಏರ್‌ಲೈನ್ಸ್ ವಿಮಾನದ ಕ್ಯಾಪ್ಟನ್ ಆಬಿದ್ ಸುಲ್ತಾನ್ ಆಘಾತಕ್ಕೆ ಒಳಗಾಗಿದ್ದರು ಹಾಗೂ ಮಾನಸಿಕವಾಗಿ ಘಾಸಿಗೊಂಡಿದ್ದರು ಎಂದು ಅಂತಿಮ ತನಿಖಾ ವರದಿಯ ಕರಡು ಪ್ರತಿ ತಿಳಿಸಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘‘ಈ ಅಪನಂಬಿಕೆ ಮತ್ತು ಆಘಾತದಿಂದಾಗಿ ಪೈಲಟ್ ಕಾಕ್‌ಪಿಟ್‌ನಲ್ಲಿ ನಿರಂತರವಾಗಿ ಧೂಮಪಾನ ಮಾಡಿದ್ದಾರೆ ಹಾಗೂ ಹಾರಾಟದ ಅವಧಿಯಲ್ಲಿ ಹಲವು ಬಾರಿ ಭಾವಾವೇಶಕ್ಕೆ ಒಳಗಾಗಿದ್ದಾರೆ’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News