ಮ್ಯಾನ್ಮಾರ್: ‘ರಾಯ್ಟರ್ಸ್’ ಪತ್ರಕರ್ತರ ಪ್ರಕರಣದ ತೀರ್ಪು ಮುಂದೂಡಿಕೆ

Update: 2018-08-27 17:49 GMT

ಯಾಂಗನ್ (ಮ್ಯಾನ್ಮಾರ್), ಆ. 27: ಮ್ಯಾನ್ಮಾರ್‌ನಲ್ಲಿ ಸರಕಾರಿ ರಹಸ್ಯಗಳ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪವನ್ನು ಎದುರಿಸುತ್ತಿರುವ ಇಬ್ಬರು ‘ರಾಯ್ಟರ್ಸ್’ ವರದಿಗಾರರ ವಿರುದ್ಧದ ಪ್ರಕರಣದ ತೀರ್ಪನ್ನು ಸೆಪ್ಟಂಬರ್ 3ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

8 ತಿಂಗಳ ಕಾಲ ಪತ್ರಕರ್ತರಾದ ವಾ ಲೋನ್ (32) ಮತ್ತು ಕ್ಯಾವ್ ಸೋ (28) ಅವರ ವಿಚಾರಣೆ ನಡೆದ ಬಳಿಕ ಸೋಮವಾರ ತೀರ್ಪು ಹೊರಬೀಳಬೇಕಿತ್ತು.

ಈ ಮಹತ್ವದ ಪ್ರಕರಣವನ್ನು ಮ್ಯಾನ್ಮಾರ್ ಪ್ರಜಾಸತ್ತೆಗೆ ಯಾವ ರೀತಿಯಲ್ಲಿ ಹೊಂದಿಕೊಂಡಿದೆ ಎಂಬುದರ ಪರೀಕ್ಷೆಯನ್ನಾಗಿ ಪರಿಗಣಿಸಲಾಗಿದೆ.

ತೀರ್ಪನ್ನು ಆಲಿಸಲು ಹಲವಾರು ರಾಜತಾಂತ್ರಿಕರು ಮತ್ತು ವರದಿಗಾರರು ನ್ಯಾಯಾಲಯದ ಆವರಣದಲ್ಲಿ ಸೇರಿದ್ದರು.

ಆದರೆ, ಕಲಾಪ ಕೇವಲ ಕೆಲವೇ ನಿಮಿಷಗಳ ಕಾಲ ನಡೆಯಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಯೆ ಲ್ವಿನ್ ಅವರ ಸ್ಥಾನದಲ್ಲಿ ಆಗಮಿಸಿ ನ್ಯಾಯಾಧೀಶರೊಬ್ಬರು, ಪ್ರಧಾನ ನ್ಯಾಯಾಧೀಶರ ಅನಾರೋಗ್ಯದ ಹಿನ್ನೆಲೆಯಲ್ಲಿ ತೀರ್ಪನ್ನು ಮುಂದಿನ ವಾರ ನೀಡಲಾಗುವುದು ಎಂದು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News