ದಕ್ಷಿಣ ಸುಡಾನ್: ದಿನಕ್ಕೆ 20,000 ಬ್ಯಾರಲ್ ಹೆಚ್ಚು ತೈಲ ಉತ್ಪಾದನೆ

Update: 2018-08-27 17:59 GMT

ಖಾರ್ಟೂಮ್, ಆ. 27: ಟೋಮಾ ಸೌತ್ ತೈಲ ನಿಕ್ಷೇಪದಲ್ಲಿ ದಿನಕ್ಕೆ 20,000 ಬ್ಯಾರಲ್ ಕಚ್ಚಾತೈಲ ಉತ್ಪಾದನೆಯನ್ನು ದಕ್ಷಿಣ ಸುಡಾನ್ ಪುನರಾರಂಭಿಸಿದೆ ಎಂದು ಸುಡಾನ್ ತೈಲ ಸಚಿವ ಅಝರ್ ಅಬ್ದುಲ್‌ಖಾದರ್ ಹೇಳಿದ್ದಾರೆ.

ಇಲ್ಲಿನ ತೈಲ ಉತ್ಪಾದನೆಯನ್ನು 2013ರಿಂದ ಸ್ಥಗಿತಗೊಳಿಸಲಾಗಿತ್ತು.

ಈಗಾಗಲೇ ಸ್ಥಗಿತಗೊಂಡಿರುವ ತೈಲ ನಿಕ್ಷೇಪಗಳ ಪೈಕಿ ಐದರ ನಿರ್ವಹಣಾ ಕಾಮಗಾರಿ ಈ ವರ್ಷದ ಕೊನೆಯಲ್ಲಿ ಪೂರ್ಣಗೊಂಡ ಬಳಿಕ, ಅವುಗಳ ತೈಲೋತ್ಪಾದನೆ ದಿನಕ್ಕೆ 80,000 ಬ್ಯಾರಲ್ ತಲುಪುವ ನಿರೀಕ್ಷೆಯಿದೆ ಎಂದು ರಾಜಧಾನಿ ಖಾರ್ಟೂಮ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಿಳಿಸಿದರು.

ದಕ್ಷಿಣ ಸುಡಾನ್‌ನ ತೈಲೋತ್ಪಾದನೆ ಈಗ ದಿನಕ್ಕೆ 1,30,000 ಬ್ಯಾರಲ್ ಆಗಿದ್ದು ಅದು ವರ್ಷಾಂತ್ಯದ ವೇಳೆಗೆ ದಿನಕ್ಕೆ 2,10,000 ಬ್ಯಾರಲ್‌ಗೆ ಏರಲಿದೆ.

 2011ರಲ್ಲಿ ತೈಲೋತ್ಪಾದನೆ ದಿನಕ್ಕೆ 3,50,000 ಬ್ಯಾರಲ್ ಇದ್ದಾಗ ದಕ್ಷಿಣ ಸುಡಾನ್ ಸುಡಾನ್‌ನಿಂದ ಪ್ರತ್ಯೇಕಗೊಂಡಿತು. ಆದರೆ, ಎರಡು ವರ್ಷಗಳ ಬಳಿಕ ಅಲ್ಲಿ ಆಂತರಿಕ ಯುದ್ಧ ಆರಂಭಗೊಂಡಿತು. ಯುದ್ಧ ಆರಂಭಗೊಳ್ಳುವ ಸಂದರ್ಭದಲ್ಲಿ ತೈಲೋತ್ಪಾದನೆ ದಿನಕ್ಕೆ 2,45,000 ಬ್ಯಾರಲ್ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News