ಟೆಸ್ಟ್ ಕ್ರಿಕೆಟ್‌ನಲ್ಲಿ 6 ಸಾವಿರ ರನ್‌ಗಳ ಮೈಲುಗಲ್ಲನ್ನು ಮುಟ್ಟಿದ ಕೊಹ್ಲಿ

Update: 2018-08-31 14:12 GMT

ಸೌಥ್‌ಹ್ಯಾಂಪ್ಟನ್, ಆ.31: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 6,000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ.

 ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಕ್ರಿಕೆಟ್ ಟೆಸ್ಟ್‌ನ ಎರಡನೇ ದಿನವಾಗಿರುವ ಶುಕ್ರವಾರ ಭಾರತದ ಮೊದಲ ಇನಿಂಗ್ಸ್‌ನಲ್ಲಿ ಕೊಹ್ಲಿ 9 ರನ್ ಗಳಿಸುವುದರೊಂದಿಗೆ 6,000 ರನ್ ಪೂರೈಸಿದರು. ಕೊಹ್ಲಿ ವೇಗವಾಗಿ 6 ಸಾವಿರ ರನ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

   ಮಾಜಿ ನಾಯಕ ಸುನೀಲ್ ಗವಾಸ್ಕರ್ 65 ಟೆಸ್ಟ್‌ಗಳ 117 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ವಿರಾಟ್ ಕೊಹ್ಲಿ ಇದೀಗ 70ನೇ ಟೆಸ್ಟ್‌ನ 119ನೇ ಇನಿಂಗ್ಸ್‌ನಲ್ಲಿ 6 ಸಾವಿರ ರನ್ ಪೂರ್ಣಗೊಳಿಸಿದ್ದಾರೆ.

 ಟೀಮ್ ಇಂಡಿಯಾದ ಮಾಜಿ ದಾಂಡಿಗ ವೀರೇಂದ್ರ ಸೆಹ್ವಾಗ್ 72 ನೆ ಟೆಸ್ಟ್‌ನ 123ನೇ ಇನಿಂಗ್ಸ್ ನಲ್ಲಿ 6, 000 ರನ್ ಗಳಿಸಿದ್ದರು. ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

2014ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡಿದ್ದ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಈಗಿನ ಪ್ರವಾಸದಲ್ಲಿ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಮೂರು ಟೆಸ್ಟ್‌ಗಳಲ್ಲಿ 2 ಶತಕ ಮತ್ತು 2 ಅರ್ಧಶತಕಗಳನ್ನು ಬಾರಿಸಿದ್ದಾರೆ. ನಾಲ್ಕನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 46 ರನ್ ಗಳಿಸಿ ಔಟಾಗಿದ್ದಾರೆ.

 ಆರಂಭಿಕ ದಾಂಡಿಗ ಶಿಖರ್ ಧವನ್ ನಿರ್ಗಮನದ ಬಳಿಕ ವಿರಾಟ್ ಕೊಹ್ಲಿ ಶುಕ್ರವಾರ ಕ್ರೀಸ್‌ಗೆ ಆಗಮಿಸಿದ್ದರು. 19.5ನೇ ಎಸೆತದಲ್ಲಿ ಸ್ಟುವರ್ಟ್ ಬ್ರಾಡ್ ಎಸೆತ ದಲ್ಲಿ ಬೌಂಡರಿ ಬಾರಿಸುವ ಮೂಲಕ ಕೊಹ್ಲಿ ಖಾತೆ ತೆರೆದಿದ್ದರು. 21.5ನೇ ಓವರ್‌ನಲ್ಲಿ ಆ್ಯಂಡರ್ಸನ್ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಕೊಹ್ಲಿ 6 ಸಾವಿರ ರನ್‌ಗಳನ್ನು ಪೂರೈಸಿದ ಭಾರತದ ದಾಂಡಿಗರ ಪಟ್ಟಿಯಲ್ಲಿ ಸ್ಥಾನ ಪಡೆದರು.

ವೇಗವಾಗಿ 6 ಸಾವಿರ ರನ್ ಗಳಿಸಿದ ಭಾರತದ ದಾಂಡಿಗರು

ಆಟಗಾರರು                     ಟೆಸ್ಟ್‌               ಇನಿಂಗ್ಸ್

1.ಸುನೀಲ್ ಗವಾಸ್ಕರ್        65                 117

2. ವಿರಾಟ್ ಕೊಹ್ಲಿ              70                 119

3.ವೀರೇಂದ್ರ ಸೆಹ್ವಾಗ್        72                 123

4.ರಾಹುಲ್ ದ್ರಾವಿಡ್          73                 125

5.ಸಚಿನ್ ತೆಂಡುಲ್ಕರ್         76                 120

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News