ಐದನೇ ಟೆಸ್ಟ್: ಇಂಗ್ಲೆಂಡ್ 332 ರನ್‌ಗೆ ಆಲೌಟ್

Update: 2018-09-08 13:55 GMT

ಲಂಡನ್, ಸೆ.8: ಜೋಸ್ ಬಟ್ಲರ್ ಹಾಗೂ ಸ್ಟುವರ್ಟ್ ಬ್ರಾಡ್ ಸಾಹಸದಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 332 ರನ್ ಗಳಿಸಿ ಆಲೌಟಾಗಿದೆ.

ಎರಡನೇ ದಿನವಾದ ಶನಿವಾರ 7 ವಿಕೆಟ್‌ಗಳ ನಷ್ಟಕ್ಕೆ 198 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಪರ ಬಟ್ಲರ್ ಹಾಗೂ ಆದಿಲ್ ರಶೀದ್ ಬ್ಯಾಟಿಂಗ್ ಮುಂದುವರಿಸಿದರು. ಈ ಇಬ್ಬರು 8ನೇ ವಿಕೆಟ್‌ಗೆ 33 ರನ್ ಸೇರಿಸಿದರು.

ಜಸ್‌ಪ್ರಿತ್ ಬುಮ್ರಾ ಅವರು ರಶೀದ್(15) ವಿಕೆಟ್ ಕಬಳಿಸಿ ಈ ಜೋಡಿಯನ್ನು ಬೇರ್ಪಡಿಸಿದರು. ಆಗ ಬಟ್ಲರ್‌ರೊಂದಿಗೆ ಕೈಜೋಡಿಸಿದ ಸ್ಟುವರ್ಟ್ ಬ್ರಾಡ್(38, 59 ಎಸೆತ, 3 ಬೌಂಡರಿ)9ನೇ ವಿಕೆಟ್‌ಗೆ 98 ರನ್ ಜೊತೆಯಾಟ ನಡೆಸಿ ತಂಡದ ಮೊತ್ತ 300ರ ಗಡಿ ದಾಟಲು ನೆರವಾದರು.

ಬ್ರಾಡ್ ವಿಕೆಟ್ ಉಡಾಯಿಸಿದ ಜಡೇಜ ಭಾರತಕ್ಕೆ ಮೇಲುಗೈ ಒದಗಿಸಿಕೊಟ್ಟರು. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬಟ್ಲರ್ ಟೆಸ್ಟ್ ಕ್ರಿಕೆಟ್‌ನಲ್ಲಿ 10ನೇ ಅರ್ಧಶತಕ ದಾಖಲಿಸಿದರು. 89 ರನ್‌ಗೆ ಔಟಾಗಿ ಶತಕ ವಂಚಿತರಾದ ಬಟ್ಲರ್ 133 ಎಸೆತಗಳನ್ನು ಎದುರಿಸಿ 6 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಬಟ್ಲರ್ ವಿಕೆಟ್ ಉರುಳಿಸಿದ ರವೀಂದ್ರ ಜಡೇಜ ಇಂಗ್ಲೆಂಡ್‌ನ ಮೊದಲ ಇನಿಂಗ್ಸ್‌ಗೆ ತೆರೆ ಎಳೆದರು. 

ಭಾರತದ ಪರ ವೇಗದ ಬೌಲರ್‌ಗಳಾದ ಬುಮ್ರಾ(3-83) ಹಾಗೂ ಇಶಾಂತ್ ಶರ್ಮಾ(3-62) ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, 79 ರನ್‌ಗೆ 4 ವಿಕೆಟ್ ಉಡಾಯಿಸಿದ ಜಡೇಜ ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News