ಮುಶ್ಫೀಕುರ್ರಹೀಂ ಶತಕ: ಬಾಂಗ್ಲಾದೇಶ 261
ದುಬೈ, ಸೆ.15: ಇಲ್ಲಿ ಆರಂಭಗೊಂಡ ಏಶ್ಯಕಪ್ ಕ್ರಿಕೆಟ್ ಟೂರ್ನಮೆಂಟ್‌ನ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ತಂಡ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಶ್ಫೀಕುರ್ರಹೀಂ ಆಕರ್ಷಕ ಶತಕದ ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ದುಬೈ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡ 49.3 ಓವರ್‌ಗಳಲ್ಲಿ 261 ರನ್‌ಗಳಿಗೆ ಆಲೌಟಾಗಿದೆ.
ಮುಶ್ಫೀಕುರ್ರಹೀಂ ಕೊನೆಯಲ್ಲಿ ತಿಸ್ಸರಾ ಪೆರೆರಾ ಎಸೆತದಲ್ಲಿ ಕುಸಾಲ್ ಮೆಂಡಿಸ್‌ಗೆ ಕ್ಯಾಚ್ ನೀಡುವುದರೊಂದಿಗೆ ಬಾಂಗ್ಲಾ ಆಲೌಟಾಯಿತು. ರಹೀಂ ಔಟಾಗುವ ಮೊದಲು 144 ರನ್(150ಎ, 11ಬೌ,4ಸಿ) ಗಳಿಸಿದರು.
188ನೇ ಏಕದಿನ ಪಂದ್ಯವನ್ನಾಡುತ್ತಿರುವ ರಹೀಂ 123 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 6ನೇ ಶತಕ ಗಳಿಸಿದರು.
ಲಸಿತ್ ಮಾಲಿಂಗ ದಾಳಿಗೆ ಸಿಲುಕಿ 1 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾಕ್ಕೆ ಮೂರನೇ ವಿಕೆಟ್‌ಗೆ ನೆರವಾದ ಮುಶ್ಫೀಕುರ್ರಹೀಂ ಮತ್ತು ಮುಹಮ್ಮದ್ ಮಿಥುನ್ 133 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಆಧರಿಸಿದರು. ಮಿಥುನ್ 63 ರನ್(68ಎ, 5ಬೌ,2ಸಿ) ಗಳಿಸಿದರು.
ಲಂಕಾ ತಂಡದ ಲಿಸಿತ್ ಮಾಲಿಂಗ 23ಕ್ಕೆ 4 ವಿಕೆಟ್ ಪಡೆದರು.