ಸಿರಿಯ ಕರಾವಳಿಯಲ್ಲಿ ಅನಿರೀಕ್ಷಿತವಾಗಿ ರಶ್ಯದ ಯುದ್ಧವಿಮಾನ ನಾಪತ್ತೆ

Update: 2018-09-18 15:58 GMT

ಮಾಸ್ಕೊ, ಸೆ. 18: ಸಿರಿಯದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿರುವಂತೆಯೇ, 14 ಸೈನಿಕರನ್ನು ಒಯ್ಯುತ್ತಿದ್ದ ನಮ್ಮ ಯುದ್ಧವಿಮಾನವೊಂದು ಸೋಮವಾರ ರಾತ್ರಿ ಮೆಡಿಟರೇನಿಯನ್ ಸಮುದ್ರದ ಆಕಾಶದಲ್ಲಿ ರಾಡಾರ್‌ನಿಂದ ನಾಪತ್ತೆಯಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.

‘‘ಸಿರಿಯ ಕರಾವಳಿಯಿಂದ 35 ಕಿಲೋಮೀಟರ್ ದೂರದಲ್ಲಿ ಮೆಡಿಟರೇನಿಯನ್ ಸಮುದ್ರದ ಆಕಾಶದಲ್ಲಿ ರಶ್ಯದ ಐಎಲ್-20 ವಿಮಾನವೊಂದರ ಸಿಬ್ಬಂದಿ ಜೊತೆಗಿನ ಸಂಪರ್ಕ ಕಡಿದುಹೋಗಿದೆ. ಆಗ ವಿಮಾನವು ಹಮೀಮಿಮ್ ವಾಯುನೆಲೆಗೆ ಹಿಂದಿರುಗುತ್ತಿತ್ತು’’ ಎಂದು ರಶ್ಯ ರಕ್ಷಣಾ ಸಚಿವಾಲಯ ಮಂಗಳವಾರ ಬೆಳಗ್ಗೆ ತಿಳಿಸಿದೆ.

ವಿಮಾನದಲ್ಲಿದ್ದ ಸೈನಿಕರ ಸ್ಥಿತಿ ಏನಾಗಿದೆ ಎನ್ನುವುದು ತಿಳಿದಿಲ್ಲ ಎಂದು ಹೇಳಿಕೆಯೊಂದರಲ್ಲಿ ಸಚಿವಾಲಯ ತಿಳಿಸಿದೆ.

ವಿಮಾನಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಮೆಡಿಟರೇನಿಯನ್ ಸಮುದ್ರಕ್ಕೆ ಅಪ್ಪಳಿಸಿತೆ?

ಆಕಾಶದಲ್ಲಿ ನಡೆದ ‘ಅನಿರೀಕ್ಷಿತ ಗಂಭೀರ ಘಟನೆ’ಯೊಂದರ ಪರಿಣಾಮವಾಗಿ ರಶ್ಯದ ಯುದ್ಧ ವಿಮಾನವು ಮೆಡಿಟರೇನಿಯನ್ ಸಮುದ್ರಕ್ಕೆ ಅಪ್ಪಳಿಸಿರಬಹುದು ಎಂದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ತಂಡದ ಮೂಲವೊಂದು ‘ಇಂಟರ್‌ಫ್ಯಾಕ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದೆ.

ಸೋಮವಾರ ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ಇಸ್ರೇಲ್‌ನ 4 ಎಫ್-16 ಯುದ್ಧ ವಿಮಾನಗಳು ಸಿರಿಯದ ಲಟಕಿಯ ಪ್ರಾಂತದ ಆಕಾಶದಲ್ಲಿ ನಡೆಸಿದ ದಾಳಿಯ ವೇಳೆ ರಶ್ಯ ವಿಮಾನ ರಾಡಾರ್‌ನಿಂದ ಮರೆಯಾಗಿದೆ ಎಂದು ರಶ್ಯ ರಕ್ಷಣಾ ಸಚಿವಾಲಯ ಹೇಳಿದೆ.

ಜಗತ್ತಿನ ಪ್ರಥಮ ಜಲಜನಕ ಚಾಲಿತ ರೈಲಿಗೆ ಚಾಲನೆ

ಜಗತ್ತಿನ ಪ್ರಥಮ ಜಲಜನಕ ಚಾಲಿತ ರೈಲಿಗೆ ಜರ್ಮನಿಯಲ್ಲಿ ಸೋಮವಾರ ಚಾಲನೆ ನೀಡಲಾಗಿದೆ.

ಇದು ಮಾಲಿನ್ಯಕಾರಕ ಡೀಸೆಲ್ ಚಾಲಿತ ರೈಲುಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಒದಗಿಸುವ ಮೊದಲ ಹಂತದ ಪ್ರಯತ್ನವಾಗಿದೆ. ಜಲಜನಕ ಚಾಲಿತ ರೈಲು ಪರಿಸರಸ್ನೇಹಿಯಾದರೂ, ಡೀಸೆಲ್ ರೈಲಿಗೆ ಹೋಲಿಸಿದರೆ ದುಬಾರಿಯಾಗಿರುತ್ತದೆ.

ಫ್ರಾನ್ಸ್‌ನ ‘ಅಲ್‌ಸ್ಟಾಮ್’ ಸಂಸ್ಥೆ ನಿರ್ಮಿಸಿರುವ ಎರಡು ನೀಲಿ ಬಣ್ಣದ ‘ಕೊರಾಡಿಯ ಇಲಿಂಟ್’ ರೈಲುಗಳು ಉತ್ತರ ಜರ್ಮನಿಯ ಕಕ್ಸ್‌ಹ್ಯಾವನ್, ಬ್ರೆಮರ್‌ಹ್ಯಾವನ್, ಬ್ರೆಮರ್‌ವೋರ್ಡ್ ಮತ್ತು ಬಕ್ಸ್‌ಟೆಹೂಡ್ ನಗರಗಳ ನಡುವಿನ 100 ಕಿ.ಮೀ. ಮಾರ್ಗದಲ್ಲಿ ಓಡಾಟವನ್ನು ಆರಂಭಿಸಿವೆ.

 ‘‘ಜಗತ್ತಿನ ಮೊದಲ ಜಲಜನಕ ಚಾಲಿತ ರೈಲುಗಳು ವಾಣಿಜ್ಯ ಸೇವೆಯನ್ನು ಆರಂಭಿಸಿವೆ ಹಾಗೂ ಅವುಗಳ ಸಾಮೂಹಿಕ ಉತ್ಪಾದನೆಗೆ ರಂಗ ಸಜ್ಜುಗೊಂಡಿದೆ’’ ಎಂದು ಬ್ರೆಮರ್‌ವೋರ್ಡ್‌ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅಲ್‌ಸ್ಟಾಮ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆನ್ರಿ ಪೋಪರ್ಟ್-ಲ್ಯಾಫರ್ಜ್ ಹೇಳಿದರು.

ಜಲಜನಕ ರೈಲುಗಳಲ್ಲಿ ಒದಗಿಸಲಾಗಿರುವ ಇಂಧನ ಕೋಶ (ಫುಯೆಲ್ ಸೆಲ್)ಗಳು ಜಲಜನಕ ಮತ್ತು ಆಮ್ಲಜನಕಗಳ ಸಂಯೋಜನೆ ಮೂಲಕ ವಿದ್ಯುತ್ ಉತ್ಪಾದಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಹೊರಹೊಮ್ಮುವುದು ನೀರು ಮತ್ತು ಆವಿ ಮಾತ್ರ.

ಹೆಚ್ಚುವರಿ ಇಂಧನವು ರೈಲಿನಲ್ಲಿರುವ ಅಯಾನ್ ಲಿತಿಯಮ್ ಬ್ಯಾಟರಿಗಳಲ್ಲಿ ಶೇಖರಣೆಗೊಳ್ಳುವುದು.

ಕೊರಾಡಿಯ ಇಲಿಂಟ್ ರೈಲುಗಳು ಒಂದು ಟ್ಯಾಂಕ್ ಜಲಜನಕದಿಂದ ಸುಮಾರು 1,000 ಕಿ.ಮೀ. ಓಡುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News