ಟೆಸ್ಲಾ ಸಿಇಒ ಮಸ್ಕ್ ವಿರುದ್ಧ ಬ್ರಿಟಿಶ್ ಮುಳುಗು ತಜ್ಞ ಮೊಕದ್ದಮೆ

Update: 2018-09-18 16:00 GMT

ಲಂಡನ್, ಸೆ. 18: ಥಾಯ್ಲೆಂಡ್‌ನ ಪ್ರವಾಹಪೀಡಿತ ಗುಹೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದ ಜೂನಿಯರ್ ಫುಟ್ಬಾಲ್ ತಂಡದ ಸದಸ್ಯರ ರಕ್ಷಣೆಯಲ್ಲಿ ಸಹಾಯ ಮಾಡಿದ್ದ ಬ್ರಿಟಿಶ್ ಮುಳುಗುಗಾರರೊಬ್ಬರು ಟೆಸ್ಲಾ ಕಂಪೆನಿಯ ಸಿಇಒ ಎಲಾನ್ ಮಸ್ಕ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ನಾನು ಶಿಶುಕಾಮಿ ಎಂಬುದಾಗಿ ಎಲಾನ್ ಮಸ್ಕ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಮುಳುಗು ಪರಿಣತ ವರ್ನನ್ ಅನ್‌ಸ್ವರ್ತ್ ತನ್ನ ಮೊಕದ್ದಮೆಯಲ್ಲಿ ದೂರಿದ್ದಾರೆ.

ಮಸ್ಕ್ ಟ್ವಿಟರ್‌ನಲ್ಲಿ ತಪ್ಪು ಆರೋಪವನ್ನು ಮಾಡಿದ್ದಾರೆ ಹಾಗೂ 12 ಫುಟ್ಬಾಲ್ ಆಟಗಾರರು ಮತ್ತು ಅವರ ಕೋಚನ್ನು ನಾಟಕೀಯ ಕಾರ್ಯಾಚರಣೆಯೊಂದರಲ್ಲಿ ರಕ್ಷಣೆ ಮಾಡಿದ ಬಳಿಕ ಇತರ ಹಲವಾರು ಆರೋಪಗಳನ್ನು ಮಾಡಿದ್ದಾರೆ ಎಂದು ಉತ್ತರ ಲಂಡನ್ ನಿವಾಸಿ ವರ್ನನ್ ಹೇಳಿದ್ದಾರೆ.

ಲಾಸ್ ಏಂಜಲಿಸ್‌ನ ಫೆಡರಲ್ ನ್ಯಾಯಾಲಯವೊಂದರಲ್ಲಿ ಸೋಮವಾರ ಮೊಕದ್ದಮೆ ದಾಖಲಿಸಿರುವ ಅವರು, 75,000 ಡಾಲರ್ (ಸುಮಾರು 55 ಲಕ್ಷ ರೂಪಾಯಿ) ಪರಿಹಾರ ಕೋರಿದ್ದಾರೆ ಹಾಗೂ ಮುಂದೆ ಇಂಥ ಆರೋಪಗಳನ್ನು ಪುನರಾವರ್ತಿಸುವುದರಿಂದ ಅವರನ್ನು ತಡೆಯಬೇಕು ಎಂದು ಕೋರಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಬಗ್ಗೆ ಜುಲೈ 13ರಂದು ಸಿಎನ್‌ಎನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ವರ್ನನ್, ಮಸ್ಕ್‌ರನ್ನು ಅವರ ಮಿನಿ ಸಬ್‌ಮರೀನ್ ವಿಚಾರದಲ್ಲಿ ಟೀಕಿಸಿದ್ದರು. ಇದರಿಂದ ಕೋಪಗೊಂಡ ಮಸ್ಕ್ 2.25 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ಟ್ವಿಟರ್ ಖಾತೆಯಲ್ಲಿ ವರ್ನನ್‌ರನ್ನು ‘ಶಿಶುಕಾಮಿ’ ಎಂದು ಕರೆದಿದ್ದರು.

ಬಾಲಕರ ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಲು ಮಸ್ಕ್ ಮಿನಿ ಸಬ್‌ಮರೀನ್ ಒಂದನ್ನು ತಯಾರಿಸಿ ತಂದಿದ್ದರು. ಆದರೆ, ಈ ಕಾರ್ಯಾಚರಣೆಗೆ ಅದು ಪ್ರಾಯೋಗಿಕವಲ್ಲ ಎಂಬ ತೀರ್ಮಾನಕ್ಕೆ ರಕ್ಷಣಾ ತಂಡ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News