ಚೀನಾ ಸೇನೆ ಜೊತೆ ನೇಪಾಳದ ಜಂಟಿ ಯುದ್ಧಾಭ್ಯಾಸ ಆರಂಭ

Update: 2018-09-18 16:03 GMT

ಕಠ್ಮಂಡು, ಸೆ. 18: ಭಾರತದೊಂದಿಗಿನ ‘ಬಿಮ್‌ಸ್ಟೆಕ್’ ಜಂಟಿ ಸೇನಾಭ್ಯಾಸವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದ ಬೆನ್ನಿಗೇ, ನೇಪಾಳ ಸೇನೆ ಸೋಮವಾರ ಚೆಂಗ್ಡುನಲ್ಲಿ ಚೀನಾ ಸೇನೆಯ ಜೊತೆ ಯುದ್ಧಾಭ್ಯಾಸ ಆರಂಭಿಸಿದೆ.

ಪ್ರಸಕ್ತ ಯುದ್ಧಾಭ್ಯಾಸವು ಚೀನಾ ಸೇನೆಯ ಜೊತೆ ನೇಪಾಳ ನಡೆಸುತ್ತಿರುವ ಎರಡನೇ ಯದ್ಧಾಭ್ಯಾಸವಾಗಿದೆ.

ಚೀನಾದ ಸಿಚುವಾನ್ ಪ್ರಾಂತದ ಚೆಂಗ್ಡುನಲ್ಲಿ 10 ದಿನಗಳ ಕಾಲ ‘ಸಾಗರ್‌ಮಾತಾ ಫ್ರೆಂಡ್‌ಶಿಪ್-2’ ಯುದ್ಧಾಭ್ಯಾಸ ನಡೆಯಲಿದೆ.

ಅಭ್ಯಾಸಕ್ಕಾಗಿ ಉಭಯ ಸೇನೆಗಳು ತಲಾ ಒಂದೊಂದು ಪ್ಲಟೂನ್‌ಗಳನ್ನು ನಿಯೋಜಿಸಿವೆ. ಅಭ್ಯಾಸವು ಭಯೋತ್ಪಾದನೆ ನಿಗ್ರಹ ಮತ್ತು ವಿಪತ್ತು ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಿದೆ.

‘ಬಿಮ್‌ಸ್ಟೆಕ್’ನಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದ ನೇಪಾಳ

‘ಬಿಮ್‌ಸ್ಟೆಕ್’ ಸಂಘಟನೆಯ ಆಶ್ರಯದಲ್ಲಿ ಪುಣೆಯಲ್ಲಿ ನಡೆದ ಪ್ರಥಮ ಯುದ್ಧಾಭ್ಯಾಸದಿಂದ ಚೀನಾ ಕೊನೆಯ ಕ್ಷಣದಲ್ಲಿ ಹಿಂದೆ ಸರಿದದ್ದು ವ್ಯಾಪಕ ಟೀಕೆಗೆ ಕಾರಣವಾಗಿರುವುದನ್ನು ಸ್ಮರಿಸಬಹುದಾಗಿದೆ.

‘ಬಿಮ್‌ಸ್ಟೆಕ್’ ದೇಶಗಳ ಸಂಘಟನೆಯ ಯುದ್ಧಾಭ್ಯಾಸ ರವಿವಾರ ಮುಕ್ತಾಯಗೊಂಡಿದೆ.

ನೇಪಾಳದ ಈ ದಿಢೀರ್ ನಿರ್ಧಾರವು ಭಾರತಕ್ಕೆ ‘ರಾಜತಾಂತ್ರಿಕ ನಷ್ಟ’ವಾಗಿದೆ ಎಂಬುದಾಗಿ ವೀಕ್ಷಕರು ಭಾವಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News