ಸಮಗ್ರ ಮಾತುಕತೆ ಪುನರಾರಂಭಿಸೋಣ: ಪಾಕ್ ಪ್ರಧಾನಿ ಇಮ್ರಾನ್ ಖಾನ್‌ರಿಂದ ಮೋದಿಗೆ ಪತ್ರ

Update: 2018-09-20 16:26 GMT

ಇಸ್ಲಾಮಾಬಾದ್, ಸೆ. 20: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಮಗ್ರ ಮಾತುಕತೆಗೆ ಮರುಚಾಲನೆ ನೀಡಬೇಕೆಂದು ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಪ್ರಧಾನಿ ನರೇಂದ್ರ ಮೋದಿಯನ್ನು ಒತ್ತಾಯಿಸಿದ್ದಾರೆ.

ಇದರ ಮೊದಲ ಹಂತವಾಗಿ ವಿದೇಶ ಸಚಿವರಾದ ಸುಶ್ವಾ ಸ್ವರಾಜ್ ಮತ್ತು ಶಾ ಮೆಹ್ಮೂದ್ ಕುರೇಶಿ ಈ ತಿಂಗಳ ಕೊನೆಯಲ್ಲಿ ಸಭೆ ನಡೆಸಬಹುದು ಎಂದು ಮೋದಿಗೆ ಬರೆದ ಪತ್ರವೊಂದರಲ್ಲಿ ಇಮ್ರಾನ್ ಹೇಳಿದ್ದಾರೆ.

‘‘ಪಾಕಿಸ್ತಾನ ಮತ್ತು ಭಾರತ ತ್ರಾಸದಾಯಕ ಸಂಬಂಧ ಹೊಂದಿದೆ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಆದಾಗ್ಯೂ, ಮುಂದಿನ ತಲೆಮಾರುಗಳಿಗಾಗಿ ಕಾಶ್ಮೀರ ವಿವಾದ ಸೇರಿದಂತೆ ಉಭಯ ದೇಶಗಳ ನಡುವಿನ ಎಲ್ಲ ಪ್ರಮುಖ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸುವ ಬದ್ಧತೆಯನ್ನು ನಾವು ಹೊಂದಿದ್ದೇವೆ. ನಮ್ಮ ಜನರಿಗಾಗಿ ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಇತ್ಯರ್ಥಪಡಿಸಿಕೊಳ್ಳುವುದು ಹಾಗೂ ಪರಸ್ಪರರಿಗೆ ಪೂರಕವಾದ ಪರಿಹಾರವೊಂದನ್ನು ಕಂಡುಹಿಡಿಯುವುದು ಅಗತ್ಯವಾಗಿದೆ’’ ಎಂದು ಇಮ್ರಾನ್ ಖಾನ್ ಪತ್ರದಲ್ಲಿ ಹೇಳಿದ್ದಾರೆ.

ಅದೇ ವೇಳೆ, ಸಿಯಾಚಿನ್ ಮತ್ತು ಸರ್ ಕ್ರೀಕ್‌ಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿಯೂ ಉಭಯ ದೇಶಗಳು ನಿಕಟ ಗಮನ ನೀಡಬೇಕಾದ ಅಗತ್ಯವಿದೆ ಎಂದು ಪಾಕಿಸ್ತಾನಿ ಪ್ರಧಾನಿ ಹೇಳಿದ್ದಾರೆ.

‘‘ಭಯೋತ್ಪಾದನೆ ಬಗ್ಗೆ ಮಾತನಾಡಲೂ ಪಾಕಿಸ್ತಾನ ಸಿದ್ಧವಿದೆ’’ ಎಂದು ಪತ್ರ ಹೇಳಿದೆ.

ಭಾರತದಲ್ಲಿ ನಿರಂತರ ಭಯೋತ್ಪಾದಕ ದಾಳಿಗಳು ನಡೆದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಸಮಗ್ರ ಮಾತುಕತೆ ನಿಂತುಹೋಗಿತ್ತು.

ಮೋದಿ ನಿಲುವಿಗೆ ಧನಾತ್ಮಕ ಪ್ರತಿಕ್ರಿಯೆ: ಪಾಕ್

‘‘ಈ ಮೊದಲು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿರುವ ಭಾವನೆಗಳಿಗೆ ಪ್ರಧಾನಿ ಇಮ್ರಾನ್ ಖಾನ್ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ನಾವು ಮಾತುಕತೆ ನಡೆಸಿ ಎಲ್ಲ ವಿವಾದಗಳನ್ನು ಬಗೆಹರಿಸೋಣ. ಇಮ್ರಾನ್ ಖಾನ್ ಪತ್ರಕ್ಕೆ ನಾವು ಭಾರತದ ಔಪಚಾರಿಕ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ’’ ಎಂದು ಪಾಕಿಸ್ತಾನ ವಿದೇಶ ಸಚಿವಾಲಯದ ವಕ್ತಾರ ಮುಹಮ್ಮದ್ ಫೈಸಲ್ ಹೇಳಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

 ಕಳೆದ ತಿಂಗಳು ಇಮ್ರಾನ್ ಖಾನ್ ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಸಂದೇಶವೊಂದನ್ನು ಕಳುಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಉತ್ತಮ ನೆರೆಹೊರೆ ಬಾಂಧವ್ಯವನ್ನು ಬೆಳೆಸುವ ಹಾಗೂ ರಚನಾತ್ಮಕ ಮತ್ತು ಅರ್ಥಪೂರ್ಣ ಮಾತುಕತೆಗಳನ್ನು ನಡೆಸುವ ನಿಟ್ಟಿನಲ್ಲಿ ಭಾರತದ ಬದ್ಧತೆಯನ್ನು ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News