ಶರೀಫ್ ಕುಟುಂಬ ಜೈಲಿನಿಂದ ಬಿಡುಗಡೆ: ಲಾಹೋರ್ ವಿಮಾನ ನಿಲ್ದಾಣದಲ್ಲಿ ಭಾರೀ ಸಂಖ್ಯೆಯ ಬೆಂಬಲಿಗರಿಂದ ಸ್ವಾಗತ

Update: 2018-09-20 16:36 GMT

ಲಾಹೋರ್, ಸೆ. 20: ಇಸ್ಲಾಮಾಬಾದ್ ಹೈಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್, ಅವರ ಪುತ್ರಿ ಮರ್ಯಮ್ ಮತ್ತು ಅಳಿಯನನ್ನು ಇಸ್ಲಾಮಾಬಾದ್‌ನ ಜೈಲೊಂದರಿಂದ ಬುಧವಾರ ಸಂಜೆ ಬಿಡುಗಡೆ ಮಾಡಲಾಗಿದೆ.

ಅವರನ್ನು ವಿಶೇಷ ವಿಮಾನವೊಂದರಲ್ಲಿ ಅವರ ತವರು ನಗರ ಲಾಹೋರ್‌ಗೆ ಕರೆತರಲಾಗಿದೆ.

ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವೊಂದು ಜುಲೈ ತಿಂಗಳಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ವಿವಿಧ ಅವಧಿಗಳ ಜೈಲು ಶಿಕ್ಷೆಗಳನ್ನು ವಿಧಿಸಿತ್ತು.

ಇಸ್ಲಾಮಾಬಾದ್ ಹೈಕೋರ್ಟ್ ಬುಧವಾರ ಈ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಶರೀಫ್ ಕುಟುಂಬದ ಬಿಡುಗಡೆಗೆ ಆದೇಶ ನೀಡಿರುವುದನ್ನು ಸ್ಮರಿಸಬಹುದಾಗಿದೆ.

 ಲಾಹೋರ್ ವಿಮಾನ ನಿಲ್ದಾಣದ ಹಜ್ ಟರ್ಮಿನಲ್ ಹೊರಗೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ಪಕ್ಷದ ಬೆಂಬಲಿಗರು, ಶರೀಫ್ ಕುಟುಂಬವನ್ನು ಸ್ವಾಗತಿಸಿದರು.

ಬಳಿಕ ಅವರನ್ನು ಲಾಹೋರ್‌ನ ಹೊರವಲಯದಲ್ಲಿರುವ ಅವರ ಜತಿ ಉಮ್ರಾ ನಿವಾಸಕ್ಕೆ ಕರೆದೊಯ್ಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News