ವಿಮಾನ ಕದಿಯಲು ಯತ್ನಿಸಿದ ವಿದ್ಯಾರ್ಥಿ!

Update: 2018-09-21 17:38 GMT

ಓರ್ಲಾಂಡೊ (ಫ್ಲೋರಿಡ), ಸೆ. 21: ಅಮೆರಿಕದ ಫ್ಲೋರಿಡ ರಾಜ್ಯದ ಓರ್ಲಾಂಡೊ ನಗರದ ವಿಮಾನ ನಿಲ್ದಾಣದಿಂದ 22 ವರ್ಷದ ವಿದ್ಯಾರ್ಥಿಯೊಬ್ಬ ಪ್ರಯಾಣಿಕ ವಿಮಾನವೊಂದನ್ನು ಕದಿಯಲು ಯತ್ನಿಸಿದ ಘಟನೆಯೊಂದು ವರದಿಯಾಗಿದೆ.

ಅವನು ವಿಮಾನ ನಿಲ್ದಾಣದ ಬೇಲಿ ಹಾರಿ ವಿಮಾನವನ್ನು ಏರಿದನು, ಆದರೆ ಅವನನ್ನು ಕೂಡಲೇ ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದರು.

ಫ್ಲೋರಿಡ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ ವಾಣಿಜ್ಯ ವಿಮಾನದ ಪೈಲಟ್ ಪರವಾನಿಗೆ ಹೊಂದಿದ್ದನು. ಆದರೆ, ಏರ್‌ಬಸ್ 321 ವಿಮಾನವನ್ನು ಹಾರಿಸುವ ಅರ್ಹತೆಯನ್ನು ಆತ ಹೊಂದಿರಲಿಲ್ಲ ಎಂದು ಓರ್ಲಾಂಡೊ ಮೆಲ್ಬರ್ನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರೆ ಲೊರಿ ಬುಕರ್ ಸುದ್ದಿಗಾರರಿಗೆ ತಿಳಿಸಿದರು.

ಅವನಿಗೆ ವಿಮಾನವನ್ನು ಮುಂದಕ್ಕೆ ಒಯ್ಯಲು ಸಾಧ್ಯವಾಗಲಿಲ್ಲ.

ನಿಶಾಲ್ ಸಂಕಟ್ ಎಂಬ ಆರೋಪಿಯು ಗುರುವಾರ ಬೆಳಗ್ಗೆ ವಿಮಾನ ನಿಲ್ದಾಣದ ಬೇಲಿ ಹಾರುವ ಮೊದಲು, ವಿಮಾನದಿಂದ ಸುಮಾರು 140 ಮೀಟರ್ ದೂರದಲ್ಲಿ ತನ್ನ ಕಾರನ್ನು ಚಾಲನಾ ಸ್ಥಿತಿಯಲ್ಲಿಯೇ ನಿಲ್ಲಿಸಿದ್ದನು.

ಅವನು ವಿಮಾನವನ್ನು ಸ್ಟಾರ್ಟ್ ಮಾಡಲು ಪ್ರಯತ್ನಿಸುವ ಮುನ್ನವೇ ಅಲ್ಲಿದ್ದ ಇಬ್ಬರು ತಾಂತ್ರಿಕರು ಮತ್ತು ಇಬ್ಬರು ಭದ್ರತಾ ಸಿಬ್ಬಂದಿ ಬಂಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News