ಭಯೋತ್ಪಾದಕ ದಾಳಿಗೆ ತೀವ್ರ ಪ್ರತಿಕ್ರಿಯೆ: ಇರಾನ್ ಅಧ್ಯಕ್ಷ ರೂಹಾನಿ

Update: 2018-09-23 16:53 GMT

ಟೆಹರಾನ್, ಸೆ. 23: ಇರಾಕ್ ಗಡಿ ಸಮೀಪ ಶನಿವಾರ ನಡೆದ ಸೇನಾ ಕವಾಯತಿನ ವೇಳೆ ಆಗಂತುಕರು ನಡೆಸಿದ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 29 ಮಂದಿ ಮೃತಪಟ್ಟ ಬಳಿಕ, ಈ ದಾಳಿಗೆ ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ.

ನೈರುತ್ಯ ನಗರ ಅಹ್ವಾಝ್‌ನಲ್ಲಿ ನಡೆದ ಈ ದಾಳಿಯ ಹೊಣೆಯನ್ನು ಐಸಿಸ್ ಭಯೋತ್ಪಾದಕ ಗುಂಪು ವಹಿಸಿಕೊಂಡಿದೆ.

ಆದರೆ, ಈ ದಾಳಿಯ ಹಿಂದೆ ಅಮೆರಿಕ ಬೆಂಬಲಿತ ವಿದೇಶಿ ಸರಕಾರವೊಂದಿದೆ ಎಂದು ಇರಾನ್ ಅಧಿಕಾರಿಗಳು ಆರೋಪಿಸಿದ್ದಾರೆ.

ಗುಂಡಿನ ದಾಳಿ 10ರಿಂದ 15 ನಿಮಿಷ ನಡೆಯಿತು ಹಾಗೂ ಕಲಾಶ್ನಿಕೊವ್ ರೈಫಲ್‌ಗಳನ್ನು ಹೊಂದಿದ ಹಂತಕರ ಪೈಕಿ ಕನಿಷ್ಠ ಓರ್ವ ವ್ಯಕ್ತಿ ಇರಾನ್‌ನ ರೆವಲೂಶನರಿ ಗಾರ್ಡ್ಸ್‌ನ ಸಮವಸ್ತ್ರ ಧರಿಸಿದ್ದನು ಎಂದು ದಾಳಿ ಸಂದರ್ಭದಲ್ಲಿ ಉಪಸ್ಥಿತರಿದ್ದ ಸ್ಥಳಿಯ ಪತ್ರಕರ್ತರೊಬ್ಬರು ಹೇಳಿದರು.

ದಾಳಿಯ ಹಿಂದೆ ವಿದೇಶಿ ಸರಕಾರ: ವಿದೇಶ ಸಚಿವ

‘‘ವಿದೇಶಿ ಸರಕಾರವೊಂದರಿಂದ ನೇಮಕಗೊಂಡ, ತರಬೇತಿಗೊಂಡ, ಶಸ್ತ್ರಗಳನ್ನು ಪಡೆದುಕೊಂಡ ಹಾಗೂ ಹಣ ಸ್ವೀಕರಿಸಿದ ಭಯೋತ್ಪಾದಕರು ಈ ದಾಳಿಯನ್ನು ನಡೆಸಿದ್ದಾರೆ’’ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಆರೋಪಿಸಿದರು.

ಪಾಶ್ಚಾತ್ಯ ರಾಯಭಾರಿಗಳನ್ನು ಕರೆಸಿಕೊಂಡ ಇರಾನ್

ಸೇನಾ ಕವಾಯತಿನ ಮೇಲೆ ದಾಳಿ ನಡೆಸಿದ ಭಯೋತ್ಪಾದಕ ಗುಂಪೊಂದರ ಸದಸ್ಯರಿಗೆ ಆಶ್ರಯ ನೀಡುವ ವಿಷಯಕ್ಕೆ ಸಂಬಂಧಿಸಿ ಇರಾನ್ ಬ್ರಿಟನ್, ಡೆನ್ಮಾರ್ಕ್ ಮತ್ತು ನೆದರ್‌ಲ್ಯಾಂಡ್ಸ್‌ನ ರಾಯಭಾರಿಗಳನ್ನು ಕರೆಸಿಕೊಂಡಿದೆ.

ಈ ವಿಷಯದಲ್ಲಿ ನಿಮ್ಮ ಸರಕಾರಗಳಿಗೆ ಇರಾನ್ ಈಗಾಗಲೇ ಎಚ್ಚರಿಕೆ ನೀಡಿದೆ ಎಂಬುದಾಗಿ ಡೆನ್ಮಾರ್ಕ್ ಮತ್ತು ನೆದರ್‌ಲ್ಯಾಂಡ್ಸ್ ರಾಯಭಾರಿಗಳ ಗಮನಕ್ಕೆ ತರಲಾಯಿತು ಎಂದು ವಿದೇಶ ಸಚಿವಾಲಯದ ವಕ್ತಾರ ಬಹ್ರಮ್ ಕಾಸಿಮಿ ಹೇಳಿಕೆಯೊಂದರಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News