ವಿಂಡ್‌ರಶ್ ವಿವಾದ: 124 ಭಾರತೀಯರಿಗೆ ಬ್ರಿಟನ್ ಪೌರತ್ವ

Update: 2018-09-23 16:56 GMT

ಲಂಡನ್, ಸೆ. 23: 1948 ಮತ್ತು 1973ರ ನಡುವಿನ ಅವಧಿಯಲ್ಲಿ ಬ್ರಿಟನ್‌ಗೆ ಆಗಮಿಸಿದ 124 ಭಾರತೀಯರಿಗೆ ಬ್ರಿಟನ್ ಪೌರತ್ವ ನೀಡಿದೆ.

ಅವರ ಅನಿಶ್ಚಿತ ವಾಸ್ತವ್ಯ ಸ್ಥಾನಮಾನದ ಹಿನ್ನೆಲೆಯಲ್ಲಿ ಅವರಿಗೆ ಈವರೆಗೆ ಪೌರತ್ವ ಲಭಿಸಿರಲಿಲ್ಲ. ಇದು ‘ವಿಂಡ್‌ರಶ್’ ವಿವಾದ ಎಂಬುದಾಗಿ ಜನಜನಿತವಾಗಿತ್ತು. ಈ ವಿವಾದವು ಎಪ್ರಿಲ್‌ನಲ್ಲಿ ನಡೆದ ಕಾಮನ್‌ವೆಲ್ತ್ ಶೃಂಗ ಸಮ್ಮೇಳನದಲ್ಲಿ ಬ್ರಿಟನ್ ಪ್ರಧಾನಿ ತೆರೇಸಾ ಮೇಯ ಮುಖಭಂಗಕ್ಕೆ ಕಾರಣವಾಗಿತ್ತು.

ಎರಡನೇ ಮಹಾಯುದ್ಧ ಮುಗಿದ ಬಳಿಕ ಬ್ರಿಟನ್‌ಗೆ ಬಂದ ಕಾರ್ಮಿಕರನ್ನು ‘ವಿಂಡ್‌ರಶ್’ ತಲೆಮಾರು ಎಂಬುದಾಗಿ ಕರೆಯಲಾಗುತ್ತಿದೆ. ಇದರಲ್ಲಿ ಹೆಚ್ಚಿನವರು ಕೆರಿಬಿಯನ್ ದೇಶಗಳ ನಾಗರಿಕರು.

ಅವರನ್ನು ‘ಎಂವಿ ಎಂಪಯರ್ ವಿಂಡ್‌ರಶ್’ ಹಡಗಿನಲ್ಲಿ ಬ್ರಿಟನ್‌ಗೆ ಕರೆತರಲಾಗಿತ್ತು. ಹಾಗಾಗಿ, ಅವರನ್ನು ‘ವಿಂಡ್‌ರಶ್’ ತಲೆಮಾರು ಎಂಬುದಾಗಿ ಕರೆಯಲಾಗುತ್ತಿದೆ.

‘‘156 ಭಾರತೀಯರ ಭಾರತೀಯರ ಸ್ಥಾನಮಾನವನ್ನು ಖಚಿತಪಡಿಸಲಾಗಿದೆ. ಆ ಪೈಕಿ 124 ಮಂದಿಗೆ ಪೌರತ್ವ ನೀಡಲಾಗಿದೆ ಹಾಗೂ 32 ಮಂದಿಗೆ ದೇಶದಲ್ಲಿ ಅನಿರ್ದಿಷ್ಟಾವಧಿಗೆ ಉಳಿಯಲು ಅನುಮತಿ ನೀಡಲಾಗಿದೆ’’ ಎಂದು ಗೃಹ ಕಾರ್ಯದರ್ಶಿ ಸಾಜಿದ್ ಜಾವೇದ್ ಶುಕ್ರವಾರ ಗೃಹ ವ್ಯವಹಾರಗಳ ಆಯ್ದ ಸಮಿತಿಗೆ ತಿಳಿಸಿದರು.

ದಾಖಲೆಗಳಿಲ್ಲದೆ ವಂಚಿತವಾದ ಸಮೂಹ

‘ವಿಂಡ್‌ರಶ್’ ತಲೆಮಾರು ದಶಕಗಳ ಕಾಲ ಬ್ರಿಟನ್‌ನಲ್ಲಿ ನೆಲೆಸಿದೆ. ಆದರೆ ಅವರ ವಾಸ್ತವ್ಯವನ್ನು ಸಕ್ರಮಗೊಳಿಸುವ ಅಗತ್ಯ ದಾಖಲೆಗಳನ್ನು ಅವರು ಪಡೆದಿರಲಿಲ್ಲ. ಹಾಗಾಗಿ, ಕೆಲವರು ದೇಶದಿಂದ ಗಡಿಪಾರಾಗಿದ್ದಾರೆ ಹಾಗೂ ಕೆಲವರು ಉದ್ಯೋಗ ಹಾಗೂ ಬದುಕಿನ ಇತರ ಕ್ಷೇತ್ರಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕಾಮನ್‌ವೆಲ್ತ್ ಸಮ್ಮೇಳನದಲ್ಲಿ ವಿವಾದ ಪ್ರಸ್ತಾಪಗೊಂಡ ಬಳಿಕ, ಈ ವಿಷಯದೊಂದಿಗೆ ವ್ಯವಹರಿಸಲು ಗೃಹ ಕಚೇರಿಯು ಕಾರ್ಯಪಡೆಯೊಂದನ್ನು ಸ್ಥಾಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News