ಮೊದಲ ಮಹಾಯುದ್ಧದಲ್ಲಿ ಭಾರತೀಯ ಸೈನಿಕರ ವಿರುದ್ಧ ತಾರತಮ್ಯ

Update: 2018-09-23 17:05 GMT

ಲಂಡನ್, ಸೆ. 23: ಮೊದಲನೇ ಮಹಾಯುದ್ಧದಲ್ಲಿ ಬ್ರಿಟಿಶ್ ಸೇನೆಯಲ್ಲಿ ಹೋರಾಡಿದ ಭಾರತೀಯ ಉಪಖಂಡದ ಸೈನಿಕರ ವಿರುದ್ಧ ತಾರತಮ್ಯವನ್ನು ಸೂಚಿಸುವ ದಾಖಲೆಗಳನ್ನು ನಾವು ಪತ್ತೆಹಚ್ಚಿದ್ದೇವೆ ಎಂದು ಭಾರತೀಯ ಕಲಾವಿದರ ಗುಂಪೊಂದು ಹೇಳಿದೆ.

20ನೇ ಶತಮಾನದ ಆದಿಭಾಗದಲ್ಲಿ ನಡೆದ ಯುದ್ಧದ ಶತಮಾನೋತ್ಸವದಲ್ಲಿ ಭಾಗವಹಿಸಲು ಬ್ರಿಟನ್‌ಗೆ ಹೋಗಿರುವ ಗುಂಪು ಈ ಆರೋಪ ಮಾಡಿದೆ.

100 ವರ್ಷಗಳ ಹಿಂದೆ ನಡೆದ ಯುದ್ಧದ ವೇಳೆ, ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಭಾರತೀಯ ಸೈನಿಕರಿಗೆ ಚಿಕಿತ್ಸೆ ನೀಡುವಲ್ಲಿ ಬ್ರಿಟಿಶ್ ಸಶಸ್ತ್ರ ಪಡೆಗಳು ವ್ಯವಸ್ಥಿತ ನಿರ್ಲಕ್ಷ ಧೋರಣೆಯನ್ನು ತಳೆದಿದ್ದವು ಹಾಗೂ ಯುದ್ಧಭೂಮಿಯಲ್ಲಿನ ಅನುಭವಗಳಿಂದ ಘಾಸಿಗೊಂಡಿದ್ದ ಸೈನಿಕರ ಆರೈಕೆಯಲ್ಲಿ ತಾರತಮ್ಯದ ವಿಧಾನಗಳನ್ನು ಅನುಸರಿಸಲಾಗುತ್ತಿತ್ತು ಎಂದು ದಿಲ್ಲಿಯ ‘ರ್ಯಾಕ್ಸ್ ಮೀಡಿಯ ಕಲೆಕ್ಟಿವ್’ನ ಕಲಾವಿದರು ‘ಅಬ್ಸರ್ವರ್’ ಪತ್ರಿಕೆಗೆ ಹೇಳಿದ್ದಾರೆ.

ಬ್ರಿಟಿಶ್ ಲೈಬ್ರರಿಯಿಂದ ಪಡೆದ ದಾಖಲೆಗಳು ಈ ತಾರತಮ್ಯ ಧೋರಣೆಯನ್ನು ಬಹಿರಂಗಪಡಿಸಿವೆ ಎಂದು ಅವರು ಹೇಳಿದ್ದಾರೆ.

13 ಲಕ್ಷ ಭಾರತೀಯ ಸೈನಿಕರು

ಮೊದಲನೇ ಮಹಾಯುದ್ಧದಲ್ಲಿ ಅವಿಭಜಿತ ಭಾರತದ 13 ಲಕ್ಷಕ್ಕೂ ಅಧಿಕ ಸೈನಿಕರು ಬ್ರಿಟಿಶ್ ಭಾರತೀಯ ಸೇನೆಯ ಪರವಾಗಿ ಹೋರಾಡಿದ್ದರು.

ಯುರೋಪ್‌ನಲ್ಲಿ ಆರಂಭಗೊಂಡ ಯುದ್ಧವು 1914ರಿಂದ 1918ರವರೆಗೆ ನಡೆಯಿತು. ಇತಿಹಾಸದ ಬೃಹತ್ ಯುದ್ಧಗಳ ಪೈಕಿ ಒಂದಾಗಿರುವ ಆ ಯುದ್ಧದಲ್ಲಿ 6 ಕೋಟಿ ಯುರೋಪಿಯನ್ನರು ಸೇರಿದಂತೆ 7 ಕೋಟಿಗೂ ಅಧಿಕ ಸೇನಾ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News