ಅಸಾಂಜ್ ತಪ್ಪಿಸಿಕೊಳ್ಳಲು ರಶ್ಯ ಯೋಜನೆ ರೂಪಿಸಿತ್ತು: ‘ದ ಗಾರ್ಡಿಯನ್’

Update: 2018-09-23 17:17 GMT

ಲಂಡನ್, ಸೆ. 23: ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಿಂದ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ರಶ್ಯಕ್ಕೆ ಸಾಗಿಸಲು ರಶ್ಯ ಅಧಿಕಾರಿಗಳು ಗುಪ್ತ ಯೋಜನೆಯೊಂದನ್ನು ರೂಪಿಸಿದ್ದರು ಎಂದು ‘ದ ಗಾರ್ಡಿಯನ್’ ಪತ್ರಿಕೆ ಹೇಳಿಕೊಂಡಿದೆ.

ಅಸಾಂಜ್ ವಿರುದ್ಧ ಸ್ವೀಡನ್‌ನಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ವಿಚಾರಣೆ ಎದುರಿಸಲು ಸ್ವೀಡನ್‌ಗೆ ಗಡಿಪಾರು ಮಾಡುವ ಬ್ರಿಟನ್‌ನ ನಿರ್ಧಾರವನ್ನು ಪ್ರಶ್ನಿಸಿ ಅವರು ಬ್ರಿಟನ್ ನ್ಯಾಯಾಲಯಕ್ಕೆ ಹೋಗಿದ್ದರು.

ಆದರೆ, ನ್ಯಾಯಾಲಯದಲ್ಲಿ ಸೋಲುಂಟಾದ ಹಿನ್ನೆಲೆಯಲ್ಲಿ ಬಂಧನವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಅವರು ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದಾರೆ.

ಕಳೆದ ವರ್ಷದ ಕ್ರಿಸ್ಮಸ್ ಮುನ್ನಾ ದಿನದಂದು 47 ವರ್ಷದ ಅಸಾಂಜ್‌ರನ್ನು ಇಕ್ವೆಡಾರ್ ರಾಯಭಾರ ಕಚೇರಿಯಿಂದ ರಶ್ಯಕ್ಕೆ ಸಾಗಿಸಲು ರಶ್ಯ ಅಧಿಕಾರಿಗಳು ಯೋಜನೆಯೊಂದನ್ನು ರೂಪಿಸಿದ್ದರು ಎಂದು ಪತ್ರಿಕೆ ಹೇಳಿಕೊಂಡಿದೆ. ಈ ಕಾರ್ಯಾಚರಣೆಯಲ್ಲಿ ರಾಜತಾಂತ್ರಿಕ ವಾಹನವೊಂದನ್ನು ಬಳಸಲು ಉದ್ದೇಶಲಾಗಿತ್ತು ಎಂದಿದೆ.

ಆದರೆ, ಕೊನೆಯ ಕ್ಷಣದಲ್ಲಿ ಈ ಯೋಜನೆಯನ್ನು ಕೈಬಿಡಲಾಯಿತು ಎಂದು ಪತ್ರಿಕೆ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News