ಏಶ್ಯಕಪ್ ಸೂಪರ್-4 ಪಂದ್ಯ: ಭಾರತಕ್ಕೆ 253 ರನ್ ಗುರಿ

Update: 2018-09-25 15:28 GMT

ದುಬೈ,ಸೆ.25: ಆರಂಭಿಕ ಆಟಗಾರ ಮುಹಮ್ಮದ್ ಶಾಝಾದ್ ಶತಕ ಹಾಗೂ ಮುಹಮ್ಮದ್ ನಬಿ ಅರ್ಧಶತಕದ ಕೊಡುಗೆ ನೆರವಿನಿಂದ ಅಫ್ಘಾನಿಸ್ತಾನ ತಂಡ ಭಾರತ ವಿರುದ್ಧದ ಏಶ್ಯಕಪ್‌ನ ಸೂಪರ್-4 ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 252 ರನ್ ಕಲೆ ಹಾಕಿದೆ.

ಮಂಗಳವಾರ ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

ಮೊದಲ ವಿಕೆಟ್‌ಗೆ 65 ರನ್ ಜೊತೆಯಾಟ ನಡೆಸಿದ ಶಾಝಾದ್(124,116 ಎಸೆತ, 11 ಬೌಂಡರಿ, 7 ಸಿಕ್ಸರ್) ಹಾಗೂ ಜಾವೇದ್ ಅಹ್ಮದಿ(5) ಉತ್ತಮ ಆರಂಭ ನೀಡಿದರು.

ಅಹ್ಮದಿ ಔಟಾದ ಬಳಿಕ ದಿಢೀರ್ ಕುಸಿತ ಕಂಡ ಅಫ್ಘಾನಿಸ್ತಾನ 82 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಗುಲ್ಬದಿನ್ ನೈಬ್(15) ಅವರೊಂದಿಗೆ 5ನೇ ವಿಕೆಟ್‌ಗೆ 50 ರನ್ ಸೇರಿಸಿದ ಶಾಝಾದ್ ತಂಡಕ್ಕೆ ಆಸರೆಯಾದರು.

ನೈಬ್ ಔಟಾದ ಬಳಿಕ ಮುಹಮ್ಮದ್ ನಬಿ(64,56 ಎಸೆತ, 3 ಬೌಂಡರಿ, 4 ಸಿಕ್ಸರ್) ಅವರೊಂದಿಗೆ 6ನೇ ವಿಕೆಟ್‌ಗೆ 48 ರನ್ ಜೊತೆಯಾಟ ನಡೆಸಿದ ಶಾಝಾದ್ ತಂಡದ ಸ್ಕೋರನ್ನು 180ಕ್ಕೆ ತಲುಪಿಸಿದರು. ತಂಡದ ಪರ ಏಕಾಂಗಿ ಹೋರಾಟ ನೀಡಿದ ಶಾಝಾದ್‌ಗೆ 38ನೇ ಓವರ್‌ನಲ್ಲಿ ಕೇದಾರ್ ಜಾಧವ್ ಪೆವಿಲಿಯನ್ ಹಾದಿ ತೋರಿಸಿದರು.

ಶಾಝಾದ್ ಔಟಾದ ಬಳಿಕ ನಜಿಬುಲ್ಲಾ ಝದ್ರಾನ್(20) ಅವರೊಂದಿಗೆ ಕೈಜೋಡಿಸಿದ ನಬಿ 7ನೇ ವಿಕೆಟ್‌ಗೆ 46 ರನ್ ಸೇರಿಸಿ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು.

56 ಎಸೆತಗಳಲ್ಲಿ 64 ರನ್ ಗಳಿಸಿದ ಮಾಜಿ ನಾಯಕ ನಬಿ 48ನೇ ಓವರ್‌ಗೆ ವಿಕೆಟ್ ಒಪ್ಪಿಸಿದರು. ರಶೀದ್ ಖಾನ್(ಔಟಾಗದೆ 12) ಹಾಗೂ ಆಲಂ(2) ಔಟಾಗದೆ ಉಳಿದರು.

ರವೀಂದ್ರ ಜಡೇಜ(46ಕ್ಕೆ3) ಹಾಗೂ ಕುಲ್‌ದೀಪ್ ಯಾದವ್(38ಕ್ಕೆ2) 5 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News