ಏಷ್ಯಾ ಕಪ್: ಭಾರತದ ವಿರುದ್ಧ ರೋಚಕ ಟೈ ಸಾಧಿಸಿದ ಅಫ್ಘಾನ್

Update: 2018-09-26 03:51 GMT

ದುಬೈ, ಸೆ.26: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಪಂದ್ಯದಲ್ಲಿ ಬಲಾಢ್ಯ ಭಾರತದ ವಿರುದ್ಧ ಅಪ್ಘಾನಿಸ್ತಾನ ರೋಚಕ ಟೈ ಸಾಧಿಸಿ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಯಿತು.

ಕೊನೆಕ್ಷಣದಲ್ಲಿ ತಂಡವನ್ನು ಸೋಲಿನ ಅಂಚಿನಿಂದ ಪಾರು ಮಾಡುವಲ್ಲಿ ರವೀಂದ್ರ ಜಡೇಜಾ ಪ್ರಯತ್ನ ನಡೆಸಿದರು. ಆದರೆ 34 ಎಸೆತಗಳಲ್ಲಿ 25 ರನ್ ಗಳಿಸಿದ್ದ ಜಡೇಜಾ, ರಶೀದ್ ಖಾನ್ ಎಸೆತದಲ್ಲಿ ನಜೀಬುಲ್ಲಾ ಅವರಿಗೆ ಕ್ಯಾಚ್ ನೀಡುವ ಮೂಲಕ ಇನ್ನೂ ಒಂದು ಎಸೆತ ಇರುವಂತೆಯೇ ಭಾರತ ಆಲೌಟ್ ಆಯಿತು. ಈ ಮೂಲಕ ಎಂ.ಎಸ್.ಧೋನಿ ನಾಯಕನಾಗಿ ಆಡಿದ 200ನೇ ಪಂದ್ಯ ಟೈನಲ್ಲಿ ಅಂತ್ಯವಾಯಿತು.

253 ರನ್ನುಗಳ ಗೆಲುವಿನ ಗುರಿ ಪಡೆದ ಭಾರತಕ್ಕೆ ಲೋಕೇಶ್ ರಾಹುಲ್ 66 ಎಸೆತಗಳಲ್ಲಿ 60 ಹಾಗೂ ಅಂಬಟಿ ರಾಯುಡು 57 (49) ಭರ್ಜರಿ ಆರಂಭ ಒದಗಿಸಿದರು. ಭಾರತ ವಿಕೆಟ್ ನಷ್ಟವಿಲ್ಲದೇ 110 ರನ್ ಗಳಿಸಿದ್ದಾಗ ನಬಿ ಅಪ್ಘಾನಿಸ್ತಾನಕ್ಕೆ ಮೊದಲ ವಿಕೆಟ್ ಗಳಿಸಿಕೊಟ್ಟರು. ಅಲ್ಪ ಅಂತರದಲ್ಲೇ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ರಾಹುಲ್ ಅವರನ್ನು ರಶೀದ್ ಖಾನ್ ಪೆವಿಲಿಯನ್‌ಗೆ ಕಳುಹಿಸಿದರು. ನಾಯಕ ಧೋನಿ, ಮನೀಶ್ ಪಾಂಡೆ ಮತ್ತು ಕೇದಾರ್ ಜಾಧವ್ ಅವರು ಅಗ್ಗದ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಭಾರತ ಸೋಲಿನ ದವಡೆಗೆ ಸಿಲುಕಿತು. ಆ ಹಂತದಲ್ಲಿ 66 ಎಸೆತಗಳಲ್ಲಿ 44 ರನ್ ಗಳಿಸಿದ ದಿನೇಶ್ ಕಾರ್ತಿಕ್ ತಂಡವನ್ನು ಆಧರಿಸಲು ಪ್ರಯತ್ನಿಸಿದರು. ಗೆಲುವಿಗೆ ಇನ್ನೂ 48 ರನ್‌ಗಳು ಬೇಕಿದ್ದಾಗ ದಿನೇಶ್ ಕಾರ್ತಿಕ್ ಔಟಾದರು. ದೀಪಕ್ ಚಹಾರ್, ಕುಲದೀಪ್ ಯಾದವ್, ಸಿದ್ಧಾರ್ಥ್ ಕೌಲ್ ಪೆವಿಲಿಯನ್‌ಗೆ ಪರೇಡ್ ನಡೆಸಿದರು.

ಭಾರತದ ವಿರುದ್ಧ ದಾಖಲೆ ಶತಕ ಬಾರಿಸಿದ ಮುಹಮ್ಮದ್ ಶಹಝಾದ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News