ಟ್ರಂಪ್ ಕೈಕುಲುಕಿದ್ದಕ್ಕೆ ‘ಅನೌಪಚಾರಿಕ ಸಭೆ’ ಎಂದು ಹೇಳಿಕೊಂಡ ಪಾಕ್ ವಿದೇಶ ಸಚಿವ

Update: 2018-09-27 16:54 GMT

ವಾಶಿಂಗ್ಟನ್, ಸೆ. 27: ನ್ಯೂಯಾರ್ಕ್‌ನಲ್ಲಿ ಮಂಗಳವಾರ ನಡೆದ ಭೋಜನಕೂಟದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿಯ ಕೈಕುಲುಕಿದರು. ಆದರೆ, ಅಷ್ಟಕ್ಕೇ ಅದೊಂದು ಟ್ರಂಪ್ ಜೊತೆಗಿನ ‘ಅನೌಪಚಾರಿಕ ಸಭೆ’ಯಾಗಿತ್ತು ಹಾಗೂ ಹಾನಿಗೊಳಗಾಗಿರುವ ದ್ವಿಪಕ್ಷೀಯ ಸಂಬಂಧವನ್ನು ‘ಪುನರ್ನಿರ್ಮಿಸಲು’ ಉಭಯ ಪಕ್ಷಗಳು ಒಪ್ಪಿಕೊಂಡವು ಎಂಬ ಹೇಳಿಕೆಯನ್ನು ಕುರೇಶಿ ನೀಡಿದರು.

‘‘ಅದು ಇತರ ಜಾಗತಿಕ ನಾಯಕರೊಂದಿಗೆ ನಡೆದ ಭೋಜನಕೂಟದ ವೇಳೆ ನೀಡಿದ ಹಸ್ತಲಾಘವ ಆಗಿತ್ತು ಅಷ್ಟೆ’’ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರೊಬ್ಬರು ಹೇಳಿದರು.

 ಅಮೆರಿಕದ ಅಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ ಎಂಬ ಪಾಕಿಸ್ತಾನದ ವಿದೇಶ ಸಚಿವರ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಈ ರೀತಿಯಾಗಿ ಉತ್ತರಿಸಿದರು.

ಪಾಕ್ ವಿದೇಶ ಸಚಿವರು ನೀಡಿದ ವಿವರಗಳಿಗೆ ಅಮೆರಿಕದ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಆದರೆ, ‘‘ಯಾವುದೇ ಸಭೆ ನಡೆದಿಲ್ಲ’’ ಎಂದು ಅಮೆರಿಕ ಸರಕಾರದ ಮೂಲವೊಂದು ಸ್ಪಷ್ಟಪಡಿಸಿದೆ.

ಭಿನ್ನ ವಿವರಣೆ ನೀಡಿದ ಸಚಿವ

ಆದರೆ, ಪಾಕಿಸ್ತಾನ ವಿದೇಶ ಸಚಿವರು ‘ಪಾಕಿಸ್ತಾನ ಟೆಲಿವಿಶನ್’ಗೆ ಭಿನ್ನ ವಿವರಣೆಯೊಂದನ್ನು ನೀಡಿದ್ದಾರೆ.

‘‘ಭೋಜನಕೂಟದ ಸ್ವಾಗತ ಸ್ಥಳದಲ್ಲಿ ನಾನು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾದೆ. ಅಲ್ಲಿ ನನಗೆ ಪಾಕ್-ಅಮೆರಿಕ ಸಂಬಂಧದ ಬಗ್ಗೆ ಚರ್ಚಿಸುವ ಅವಕಾಶ ನನಗೆ ಸಿಕ್ಕಿತು. ಹಿಂದೆ ನಾವು ಹೊಂದಿದ್ದ ಹಾರ್ದಿಕ ಸಂಬಂಧವನ್ನು ಮರುನಿರ್ಮಿಸುವಂತೆ ನಾನು ಅವರಿಗೆ ಮನವಿ ಮಾಡಿದೆ’’ ಎಂದು ಕುರೇಶಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News