ಬಾಂಗ್ಲಾ ಆಲೌಟ್: ಭಾರತದ ಗೆಲುವಿಗೆ 223 ರನ್ ಸವಾಲು

Update: 2018-09-28 15:15 GMT

ದುಬೈ, ಸೆ.28: ಆರಂಭಿಕ ದಾಂಡಿಗ ಲಿಟನ್ ದಾಸ್ ಅವರ ಚೊಚ್ಚಲ ಶತಕದ ನೆರವಿನಲ್ಲಿ ಬಾಂಗ್ಲಾದೇಶ ತಂಡ ಭಾರತದ ವಿರುದ್ಧ ಏಶ್ಯಕಪ್ ಏಕದಿನ ಕ್ರಿಕೆಟ್ ಫೈನಲ್‌ನಲ್ಲಿ 48.3 ಓವರ್‌ಗಳಲ್ಲಿ 222 ರನ್ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾ ಪರ ಲಿಟನ್ ದಾಸ್ ಮತ್ತು ಆಲ್‌ರೌಂಡರ್ ಮೆಹಿದಿ ಹಸನ್ ಮಿರಾಝ್ ಮೊದಲ ವಿಕೆಟ್‌ಗೆ 20.5 ಓವರ್‌ಗಳಲ್ಲಿ 120 ರನ್‌ಗಳ ಜೊತೆಯಾಟ ನೀಡಿದರು.

ಲಿಟನ್ ದಾಸ್ 87 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ ಶತಕ ಪೂರ್ಣಗೊಳಿಸಿದರು. 18ನೇ ಏಕದಿನ ಪಂದ್ಯವನ್ನು ಆಡಿದ ಲಿಟನ್ ದಾಸ್ ಅವರ ಹಿಂದಿನ ವೈಯಕ್ತಿಕ ಗರಿಷ್ಠ ಸ್ಕೋರ್ 41 ಆಗಿತ್ತು. ಅಫ್ಘಾನಿಸ್ತಾನ್ ವಿರುದ್ಧ ಸೆ.23ರಂದು ಏಶ್ಯಕಪ್‌ನಲ್ಲಿ 41 ರನ್ ಗಳಿಸಿದ್ದರು.

23ರ ಹರೆಯದ ಲಿಟನ್ ದಾಸ್ 33 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಮೊದಲ ಬಾರಿ ಅರ್ಧಶತಕ ಗಳಿಸಿದರು. ಇವರ ನೆರವಿನಲ್ಲಿ ಬಾಂಗ್ಲಾ 18 ಓವರ್‌ಗಳಲ್ಲಿ 100ಗಳಿಸಿತು. ಲಿಟನ್ ಅರ್ಧಶತಕ ದಾಖಲಿಸಿದ ಬಳಿಕ ಗುಡುಗುವುದನ್ನು ನಿಲ್ಲಿಸಲಿಲ್ಲ.ಶತಕ ಪೂರ್ಣಗೊಳಿಸಿದರು.ಇದರೊಂದಿಗೆ ಏಶ್ಯಕಪ್‌ನ ಫೈನಲ್‌ನಲ್ಲಿ ಶತಕ ದಾಖಲಿಸಿದ ಐದನೇ ದಾಂಡಿಗ ಎನಿಸಿಕೊಂಡರು. 41ನೇ ಓವರ್‌ನಲ್ಲಿ ಕುಲ್‌ದೀಪ್ ಯಾದವ್ ಅವರ ಎಸೆತದಲ್ಲಿ ಲಿಟನ್ ದಾಸ್ ಚೆಂಡನ್ನು ಎದುರಿಸುವ ಯತ್ನದಲ್ಲಿ ಎಡವಿದರು. ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಸ್ಟಂಪ್ ಮಾಡುವ ಮೂಲಕ ಲಿಟನ್ ದಾಸ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಔಟಾಗುವ ಮೊದಲು ಲಿಟನ್‌ದಾಸ್ 121 ರನ್(117ಎ, 12ಬೌ,2ಸಿ) ಗಳಿಸಿದರು. ಹಸನ್ 32 ರನ್ ಗಳಿಸಿ ನಿರ್ಗಮಿಸಿದ ಬಳಿಕ ಬಾಂಗ್ಲಾ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತ್ತು.

 ಇಮ್ರುಲ್ ಕೈಸ್(2), ಮುಶ್ಫಿಕುರ್ರಹೀಮ್(5), ಮುಹಮ್ಮದ್ ಮಿಥುನ್(2) ಮತ್ತು ಮಹ್ಮೂದುಲ್ಲಾ (5) ಔಟಾದರು. ಸೌಮ್ಯ ಸರ್ಕಾರ್ 33 ರನ್(45ಎ,1ಬೌ,1ಸಿ) ಗಳಿಸಿ ತಂಡದ ಸ್ಕೋರ್ 220ರ ಗಡಿ ದಾಟಲು ನೆರವಾದರು.

ಮಶ್ರಾಫೆ ಮೊರ್ತಾಝ(7), ನಝ್ಮುಲ್ ಇಸ್ಲಾಂ (7) ರುಬೆಲ್ ಹುಸೈನ್(0) ಔಟಾಗುವುದರೊಂದಿಗೆ ಬಾಂಗ್ಲಾದೇಶ ತಂಡ 48.3 ಓವರ್‌ಗಳಲ್ಲಿ ಆಲೌಟಾಗಿದೆ.

ಕುಲ್‌ದೀಪ್ 45ಕ್ಕೆ 3, ಕೇದಾರ್ ಜಾಧವ್ 41ಕ್ಕೆ 3, ಬುಮ್ರಾ ಮತ್ತು ಚಹಾಲ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News