ಸಿಖ್ ಸಂಘಟನೆ ಬಬ್ಬರ್ ಖಾಲ್ಸಾವನ್ನು ಉಗ್ರ ಗುಂಪುಗಳ ಪಟ್ಟಿಗೆ ಸೇರಿಸಿದ ಅಮೆರಿಕ
ವಾಶಿಂಗ್ಟನ್, ಅ. 5: ಅಮೆರಿಕವು ಸಿಖ್ ಉಗ್ರಗಾಮಿ ಸಂಘಟನೆ ಬಬ್ಬರ್ ಖಾಲ್ಸಾವನ್ನು ವಿದೇಶಗಳಲ್ಲಿ ಅಮೆರಿಕನ್ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಗುಂಪುಗಳ ಪಟ್ಟಿಯಲ್ಲಿ ಸೇರಿಸಿದೆ.
ಅದು ವಿದೇಶಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ನಾಯಕರ ಹತ್ಯೆಗಳನ್ನು ನಡೆಸುತ್ತಿದೆ ಹಾಗೂ ಮಹತ್ವದ ಆರ್ಥಿಕ ನೆಲೆಗಳನ್ನು ಗುರಿಯಾಗಿಸಿ ಬಾಂಬ್ ದಾಳಿಗಳನ್ನು ನಡೆಸುತ್ತಿದೆ ಎಂದು ಅಮೆರಿಕ ಬಣ್ಣಿಸಿದೆ.
‘ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್’ ಹಿಂಸಾತ್ಮಕ ವಿಧಾನಗಳ ಮೂಲಕ ಭಾರತದಲ್ಲಿ ತನ್ನದೇ ಆದ ಸ್ವತಂತ್ರ ದೇಶವನ್ನು ಸ್ಥಾಪಿಸುವ ಗುರಿ ಹೊಂದಿದೆ ಹಾಗೂ ಭಾರತ ಮತ್ತು ಇತರೆಡೆಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಿದೆ ಹಾಗೂ ಈ ದಾಳಿಗಳಲ್ಲಿ ಅಮಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಶ್ವೇತಭವನ ಗುರುವಾರ ಅನಾವರಣಗೊಳಿಸಿದ ಟ್ರಂಪ್ ಆಡಳಿತದ ನೂತನ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ತಂತ್ರಗಾರಿಕೆ ತಿಳಿಸಿದೆ.
ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾಗಿರುವ ಬಬ್ಬರ್‌ಖಾಲ್ಸಾವನ್ನು ಭಾರತ, ಅಮೆರಿಕ ಮತ್ತು ಕೆನಡ ಸೇರಿದಂತೆ ಹಲವಾರು ದೇಶಗಳು ನಿಷೇಧಿಸಿವೆ.
ಉತ್ತರ ಅಮೆರಿಕದಲ್ಲೂ ಅದು ಅಲ್ಪ ಪ್ರಮಾಣದಲ್ಲಿ ಬೆಂಬಲ ನೆಲೆ ಹೊಂದಿರುವ ಹಿನ್ನೆಲೆಯಲ್ಲಿ ಅಮೆರಿಕ ವಿಧಿಸಿರುವ ನಿಷೇಧವು ಹೆಚ್ಚಿನ ಪರಿಣಾಮವನ್ನು ಬೀರಲಿದೆ.
ಪಟ್ಟಿಯಲ್ಲಿ ಪಾಕ್‌ನ 2 ಉಗ್ರ ಸಂಘಟನೆಗಳು
ವಿದೇಶಗಳಲ್ಲಿ ಅಮೆರಿಕನ್ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಗುಂಪುಗಳ ಪಟ್ಟಿಗೆ ಪಾಕಿಸ್ತಾನದ ಎರಡು ಭಯೋತ್ಪಾದಕ ಸಂಘಟನೆಗಳಾದ ಲಷ್ಕರೆ ತಯ್ಯಬ ಮತ್ತು ತೆಹ್ರೀಕಿ ತಾಲಿಬಾನ್ ಪಾಕಿಸ್ತಾನ್‌ಗಳನ್ನು ಅಮೆರಿಕ ಸೇರಿಸಿದೆ.
ಐಸಿಸ್ ಮತ್ತು ಅಲ್-ಖಾಯಿದಾ ಸೇರಿದಂತೆ ಇತರ ಹಲವಾರು ಭಯೋತ್ಪಾದಕ ಸಂಘಟನೆಗಳು ವಿದೇಶಗಳಲ್ಲಿ ಅಮೆರಿಕ ಮತ್ತು ಅದರ ಪ್ರಜೆಗಳ ಹಿತಾಸಕ್ತಿಗೆ ಬೆದರಿಕೆ ಒಡ್ಡಿವೆ ಎಂದು ಟ್ರಂಪ್ ಆಡಳಿತದ ನೂತನ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ತಂತ್ರಗಾರಿಕೆ ತಿಳಿಸಿದೆ.
ನೈಜೀರಿಯದ ಬೊಕೊ ಹರಂ ಭಯೋತ್ಪಾದಕ ಸಂಘಟನೆಯನ್ನೂ ಈ ಪಟ್ಟಿಗೆ ಸೇರಿಸಲಾಗಿದೆ.