ಅಮೆರಿಕದಿಂದ ಸರಳ, ನಿರಂತರ ವಿನಾಯಿತಿಗಳನ್ನು ನಿರೀಕ್ಷಿಸ ಬೇಡಿ

Update: 2018-10-05 16:35 GMT

ವಾಶಿಂಗ್ಟನ್, ಅ. 5: ಅಮೆರಿಕದಿಂದ ಸರಳ ಹಾಗೂ ನಿರಂತರ ವಿನಾಯಿತಿಗಳನ್ನು ಭಾರತ ಸೇರಿದಂತೆ ಇರಾನ್‌ನ ಕಚ್ಚಾತೈಲವನ್ನು ಖರೀದಿಸುವ ದೇಶಗಳು ನಿರೀಕ್ಷಿಸಬಾರದು ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ಎಚ್ಚರಿಸಿದ್ದಾರೆ.

ಇರಾನ್‌ನ ತೈಲ, ಬಂದರುಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರಗಳನ್ನು ಗುರಿಯಾಗಿಸಿ ಅಮೆರಿಕ ವಿಧಿಸಿರುವ ಎರಡನೇ ಹಂತದ ಆರ್ಥಿಕ ದಿಗ್ಬಂಧನಗಳು ನವೆಂಬರ್ 5ರಿಂದ ಜಾರಿಗೆ ಬರಲಿವೆ.

‘‘ಇದು ಒಬಾಮ ಆಡಳಿತವಲ್ಲ.... ಇದು ಇರಾನ್‌ನ ತೈಲ ಆಮದು ಮಾಡಿಕೊಳ್ಳುವ ದೇಶಗಳಿಗೆ ನಾನು ನೀಡುವ ಸಂದೇಶವಾಗಿದೆ’’ ಎಂದು ಅಮೆರಿಕ ಅಧ್ಯಕ್ಷರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು.

ರಶ್ಯದ ಜೊತೆ ವ್ಯವಹಾರ ನಡೆಸಿದರೆ ದಿಗ್ಬಂಧನ ವಿಧಿಸುವ ‘ಕ್ಯಾಟ್ಸ’ ಕಾಯಿದೆಯಿಂದ ಮತ್ತು ಇರಾನ್ ಜೊತೆ ವ್ಯವಹಾರ ನಡೆಸಿದರೆ ವಿಧಿಸಲಾಗುವ ದಿಗ್ಬಂಧನದಿಂದ ವಿನಾಯಿತಿಗೆ ಭಾರತ ಅರ್ಹವಾಗಿದೆ ಎಂಬುದಾಗಿ ಮೋದಿ ಸರಕಾರ ಅಮರಿಕಕ್ಕೆ ನಿವೇದಿಸಿಕೊಂಡಿರುವ ಹೊರತಾಗಿಯೂ ಅಮೆರಿಕ ಈ ಎಚ್ಚರಿಕೆ ಹೊರಡಿಸಿದೆ.

‘‘ಪದೇ ಪದೇ ಸುಲಭವಾಗಿ ವಿನಾಯಿತಿಗಳನ್ನು ನೀಡುವುದು ನಮ್ಮ ನೀತಿಯಲ್ಲ’’ ಎಂದು ಅವರು ಎಚ್ಚರಿಸಿದರು.

ಭಾರತದೊಂದಿಗೆ ಮಾತುಕತೆ ನಡೆಸಿದ್ದೇವೆ

ಅಮೆರಿಕದ ದಿಗ್ಬಂಧನಗಳನ್ನು ಉಲ್ಲಂಘಿಸುವ ದೇಶಗಳಿಗೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಜಾನ್ ಬೋಲ್ಟನ್ ಸ್ಪಷ್ಟಪಡಿಸಿದರು.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಭಾರತದ ಹಿರಿಯ ಅಧಿಕಾರಿಗಳೊಂದಿಗೆ ನಾನು ಮತ್ತು ಅಮೆರಿಕದ ಇತರ ಅಧಿಕಾರಿಗಳು ಈ ವಿಷಯದಲ್ಲಿ ಮಾತುಕತೆ ನಡೆಸಿದ್ದೇವೆ ಎಂದು ಅವರು ಹೇಳಿದರು.

ಇರಾನ್ ಜೊತೆ ವ್ಯಾಪಾರ ಕುರಿತ ನಮ್ಮ ನಿಲುವುಗಳನ್ನು ನಾವು ಈ ಸಂದರ್ಭದಲ್ಲಿ ಭಾರತೀಯ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News