ಇಂಟರ್‌ಪೋಲ್ ಅಧ್ಯಕ್ಷರೇ ಚೀನಾದಲ್ಲಿ ನಾಪತ್ತೆ!
ಪ್ಯಾರಿಸ್, ಅ. 5: ಸೆಪ್ಟಂಬರ್ ಕೊನೆಯಲ್ಲಿ ತನ್ನ ದೇಶ ಚೀನಾಕ್ಕೆ ಭೇಟಿ ನೀಡಿರುವ ಇಂಟರ್‌ಪೋಲ್ ಅಧ್ಯಕ್ಷ ಮೆಂಗ್ ಹೊಂಗ್‌ವೀ ನಾಪತ್ತೆಯಾಗಿದ್ದಾರೆ ಎಂದು ಫ್ರಾನ್ಸ್‌ನ ನ್ಯಾಯಾಂಗ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.
64 ವರ್ಷದ ಇಂಟರ್‌ಪೋಲ್ ಅಧ್ಯಕ್ಷರು ಚೀನಾದ ಮಾಜಿ ಹಿರಿಯ ಭದ್ರತಾ ಅಧಿಕಾರಿಯಾಗಿದ್ದಾರೆ.
ಇಂಟರ್‌ಪೋಲ್‌ನ ಪ್ರಧಾನ ನೆಲೆಯಿರುವ ಲಯೋನ್‌ನಿಂದ ಹೊರಟ ಬಳಿಕ ಅವರು ಸಂಪರ್ಕದಲ್ಲಿಲ್ಲ ಎಂದು ಮೆಂಗ್ ಹೊಂಗ್‌ವೀ ಅವರ ಪತ್ನಿ ಶುಕ್ರವಾರ ದೂರು ನೀಡಿದ್ದಾರೆ.
ಮೆಂಗ್ ಚೀನಾ ತಲುಪಿದ್ದಾರೆ ಎಂದು ನ್ಯಾಯಾಂಗ ಅಧಿಕಾರಿ ತಿಳಿಸಿದರು.
ಚೀನಾದಲ್ಲಿ ಮೆಂಗ್‌ರ ಕಾರ್ಯಕ್ರಮಗಳೇನಿತ್ತು ಎಂಬ ಬಗ್ಗೆ ವರದಿಗಳಿಲ್ಲ. ಅದೂ ಅಲ್ಲದೆ, ತನ್ನ ಗಂಡನ ನಾಪತ್ತೆಯ ಬಗ್ಗೆ ದೂರು ನೀಡಲು ಅವರ ಪತ್ನಿ ಯಾಕೆ ಇಷ್ಟು ಸಮಯ ತೆಗೆದುಕೊಂಡರು ಎನ್ನುವುದೂ ತಿಳಿದಿಲ್ಲ.
ಮೆಂಗ್ ನಾಪತ್ತೆ ಬಗ್ಗೆ ತಿಳಿದಿದೆ ಎಂದು ಹೇಳಿಕೆಯೊಂದರಲ್ಲಿ ಇಂಟರ್‌ಪೋಲ್ ತಿಳಿಸಿದೆ.
‘‘ಇದು ಫ್ರಾನ್ಸ್ ಮತ್ತು ಚೀನಾ ಅಧಿಕಾರಿಗಳ ನಡುವಿನ ವ್ಯವಹಾರವಾಗಿದೆ’’ ಎಂದು ಅದು ಹೇಳಿದೆ.
‘‘ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆಯ ಕಾರ್ಯಾಚರಣೆಗಳಿಗೆ ಅದರ ಮಹಾಕಾರ್ಯದರ್ಶಿ ಜವಾಬ್ದಾರರೇ ಹೊರತು, ಅಧ್ಯಕ್ಷರಲ್ಲ’’ ಎಂದು ಅದು ಸ್ಪಷ್ಟಪಡಿಸಿದೆ.