ಇಂಡೋನೇಶ್ಯಾ ಭೂಕಂಪ, ಸುನಾಮಿ: ನಾಪತ್ತೆಯಾದವರ ಸಂಖ್ಯೆ 5,000ಕ್ಕೆ ಏರಿಕೆ

Update: 2018-10-07 16:02 GMT

ಪಲು, ಅ.7: ಇಂಡೋನೇಶ್ಯಾದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಲ್ಲಿ ನಾಪತ್ತೆಯಾದವರ ಸಂಖ್ಯೆ 5,000 ತಲುಪಿದೆ ಎಂದು ರವಿವಾರ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಸದ್ಯದ ಲೆಕ್ಕಕ್ಕಿಂತ ಬಹಳಷ್ಟು ಪಟ್ಟು ಹೆಚ್ಚು ಜನರು ಈ ಪ್ರಾಕೃತಿಕ ದುರಂತದಲ್ಲಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

ಸೆಪ್ಟಂಬರ್ 28ರಂದು ಸುಲವೆಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಲ್ಲಿ ಸಾವನ್ನಪ್ಪಿದ 1,763 ಮಂದಿಯ ದೇಹಗಳನ್ನು ಪತ್ತೆಹಚ್ಚಿರುವುದಾಗಿ ಇಂಡೋನೇಶ್ಯಾ ವಿಪತ್ತು ಸಂಸ್ಥೆ ತಿಳಿಸಿದೆ. ಆದರೆ ಪಲು ಸಮೀಪದ ಪೆಟೊಬೊ ಮತ್ತು ಬಲರವೊದಲ್ಲಿ ಭೂಕುಸಿತದಿಂದ ನೂರಾರು ಮಂದಿ ಮಣ್ಣಿನಡಿಯಲ್ಲಿ ಹುದುಗಿ ಹೋಗಿರುವ ಸಾಧ್ಯತೆಗಳಿದ್ದು, ಇದರಿಂದ ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೆಟೊಬೊ ಮತ್ತು ಬಲರವೊದ ಗ್ರಾಮ ಮುಖ್ಯಸ್ಥರ ವರದಿಯ ಪ್ರಕಾರ ಈ ಗ್ರಾಮಗಳಲ್ಲಿ 5,000 ಮಂದಿ ನಾಪತ್ತೆಯಾಗಿದ್ದಾರೆ. ಆದರೆ ಈ ಅಂಕಿಅಂಶವನ್ನು ದೃಢೀಕರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಭೂಕುಸಿತದಿಂದ ಮಣ್ಣಿನಡಿ ಸಿಲುಕಿರುವ ಜನರ ಲೆಕ್ಕವನ್ನು ನಿಖರವಾಗಿ ಹೇಳುವುದು ಸುಲಭವಲ್ಲ ಎಂದು ಅವರು ತಿಳಿಸಿದ್ದಾರೆ.

ಆರಂಭದಲ್ಲಿ ಈ ಪ್ರಾಕೃತಿಕ ವಿಕೋಪದಲ್ಲಿ ಒಂದು ಸಾವಿರ ಮಂದಿ ನಾಪತ್ತೆಯಾಗಿದ್ದಾರೆ ಎಂದು ಲೆಕ್ಕ ಹಾಕಲಾಗಿತ್ತು. ಆದರೆ ಇದೀಗ ಈ ಪ್ರಮಾಣದಲ್ಲಿ ಐದು ಪಟ್ಟು ಏರಿಕೆಯಾಗಿದ್ದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಸದ್ಯ ಭೂಕಂಪ ಮತ್ತು ಸುನಾಮಿ ಪೀಡಿತ ಪ್ರದೇಶಗಳಲ್ಲಿ ಚಿತ್ರಣ ಸ್ಪಷ್ಟವಾಗುತ್ತಿದ್ದು ಪೆಟೊಬೊ ಮತ್ತು ಬಲರವೊದಲ್ಲಿ ವ್ಯಾಪಕ ಜೀವ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News